ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 3 ವಿಕೆಟ್ ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 227 ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 314 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ 87 ರನ್ ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ 231 ರನ್ ಗಳಿಗೆ ಆಲೌಟ್ ಆಗುವ ಮೂಲಕ 145 ರನ್ ಗಳ ಗೆಲುವಿನ ಗುರಿ ನೀಡಿತು.
ಈ ಮೊತ್ತ ಬೆನ್ನತ್ತುವಲ್ಲಿ ಎಡವಿದ ಭಾರತ ಒಂದು ಹಂತದಲ್ಲಿ 74 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಅಕ್ಸರ್ ಪಟೇಲ್ 34 ರನ್ ಗಳಿಸಿ ಔಟಾಗಿದ್ದರು. ಈ ವೇಳೆ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ತಂಡಕ್ಕೆ ಚೇತರಿಕೆ ನೀಡಿದರು. ಶ್ರೇಯಸ್ ಅಯ್ಯರ್ ಅಜೇಯ 29 ರನ್ ಗಳಿಸಿದರೆ ರವಿಚಂದ್ರನ್ ಅಶ್ವಿನ್ ಅಜೇಯ 42 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬಾಂಗ್ಲಾ ಪರ ಮೆಹದಿ ಹಸನ್ 5 ವಿಕೆಟ್ ಗಳ ಗೊಂಚಲು ಪಡೆದರು.
ಈ ಗೆಲುವಿನೊಂದಿಗೆ ಸರಣಿ 2-0 ಅಂತರದಿಂದ ಕೈವಶ ಮಾಡಿಕೊಂಡ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಕನಸನ್ನು ಜೀವಂತವಾಗಿರಿಸಿದೆ.