ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಎದುರಾಳಿಗಳಿಗೆ ಟೀಂ ಇಂಡಿಯಾ 388 ರನ್ ಗಳ ಬೃಹತ್ ಗುರಿ ನಿಗದಿಪಡಿಸಿದೆ.
ಆರಂಭಿಕರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ರೋಹಿತ್ 159 ರನ್ ಗಳಿಗೆ ಔಟಾದರೆ ರಾಹುಲ್ 102 ರನ್ ಗಳಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು.
ಆದರೆ ಬಳಿಕ ಒಂದಾದ ಯುವ ಕ್ರಿಕೆಟಿಗರಾದ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ವಿಂಡೀಸ್ ಬೌಲಿಂಗ್ ನ್ನು ಹಿಗ್ಗಾ ಮುಗ್ಗಾ ಚಚ್ಚಿದರು. ಇವರಿಬ್ಬರು ಲೀಲಾಜಾಲವಾಗಿ ಸಿಕ್ಸರ್ ಜಡಿಯುತ್ತಿದ್ದರೆ ಮೈದಾನದಲ್ಲಿದ್ದವರ ಉತ್ಸಾಹ ಮುಗಿಲು ಮುಟ್ಟಿತ್ತು.
ಎಷ್ಟೆಂದರೆ ಡ್ರೆಸ್ಸಿಂಗ್ ರೂಂನಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇತರ ಕ್ರಿಕೆಟಿಗರೂ ಶ್ರೇಯಸ್ ಗೆ ಕೈ ಸನ್ನೆ ಮೂಲಕ ಒನ್ ಮೋರ್ ಸಿಕ್ಸರ್ ಎಂದು ನಗುತ್ತಲೇ ಸನ್ನೆ ಮಾಡಿ ಹುರಿದುಂಬಿಸುತ್ತಿದ್ದರು. ದುರದೃಷ್ಟವಶಾತ್ ಇದೇ ಭರದಲ್ಲಿ ರಿಷಬ್ 39 ರನ್ ಗಳಿಸಿ ಔಟಾದರು. ಅದಾದ ಬಳಿಕ ಶ್ರೇಯಸ್ ಕೂಡಾ 32 ಎಸೆತಗಳಲ್ಲಿ 4 ಸಿಕ್ಸರ್ ಗಳೊಂದಿಗೆ 53 ರನ್ ಸಿಡಿಸಿ ಔಟಾದರು. ಆದರೆ ಇವರಿಬ್ಬರ ಜೋಡಿ ಒಂದೇ ಓವರ್ ನಲ್ಲಿ 31 ರನ್ ಸೂರೆಗೊಂಡಿದ್ದು ವಿಶೇಷವಾಗಿತ್ತು. ಇದರೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತು.