ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು 130 ರನ್ ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 150 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದೀಗ ಬಾಂಗ್ಲಾ ದ್ವಿತೀಯ ಇನಿಂಗ್ಸ್ ನಲ್ಲಿ 213 ರನ್ ಗಳಿಗೆ ಆಲೌಟ್ ಆಗುವ ಮೂಲಕ ಮೂರೇ ದಿನಕ್ಕೆ ಸೋಲುಂಡಿದೆ. ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ 4, ರವಿಚಂದ್ರನ್ ಅಶ್ವಿನ್ 3 ಮತ್ತು ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಬಳಿಸಿದರು. ಬಾಂಗ್ಲಾ ಪರ ಮುಶ್ಫಿಕರ್ ರೆಹಮಾನ್ ಮಾತ್ರ 64 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ.
ಇದು ಭಾರತಕ್ಕೆ ಸತತ ಮೂರನೇ ಇನಿಂಗ್ಸ್ ಅಂತರದ ಗೆಲುವಾಗಿದ್ದು, ಕಳೆದ ಆರು ಪಂದ್ಯಗಳಿಂದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಅಷ್ಟೇ ಅಲ್ಲ ನಾಯಕನಾಗಿ ಅತೀ ಹೆಚ್ಚು ಇನಿಂಗ್ಸ್ ಅಂತರದ ಗೆಲುವು ದಾಖಲಿಸಿದ ದಾಖಲೆಯೂ ವಿರಾಟ್ ಕೊಹ್ಲಿ ಪಾಲಾಯಿತು. ಇದು ಕೊಹ್ಲಿಗೆ 10 ನೇ ಇನಿಂಗ್ಸ್ ಅಂತರದ ಗೆಲುವಾಗಿದೆ.