ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯವಾಡಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ರಾಜ್ ಕೋಟ್ ಗೆ ಬಂದಿಳಿದಿದೆ.
ಫೆಬ್ರವರಿ 15 ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಆಟಗಾರರು ರಾಜ್ ಕೋಟ್ ಗೆ ಬಂದಿಳಿದಿದ್ದಾರೆ. ಕಳೆದ ಎರಡು ಟೆಸ್ಟ್ ಗಳಲ್ಲಿ ಎರಡೂ ತಂಡಗಳು ತಲಾ 1 ಪಂದ್ಯ ಗೆದ್ದಿರುವುದರಿಂದ ಸರಣಿ ಸಮಬಲಗೊಂಡಿದೆ.
ಮೂರನೇ ಟೆಸ್ಟ್ ಗೆ ಧ‍್ರುವ ಜ್ಯುರೆಲ್?
ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಟೀಕೆಗೊಳಗಾಗುತ್ತಿರುವುದು ವಿಕೆಟ್ ಕೀಪರ್ ಕೆಎಸ್ ಭರತ್ ಫಾರ್ಮ್. ವಿಕೆಟ್ ಕೀಪರ್ ಆಗಿ ಕಳೆದ ಎರಡು ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದ ಭರತ್ ಕೇವಲ ಕೀಪಿಂಗ್ ಗೆ ಮಾತ್ರ ಎನ್ನುವಂತಾಗಿದೆ. ಬ್ಯಾಟ್ ನಿಂದ ಅವರಿಂದ ಇದುವರೆಗೆ ಕೊಡುಗೆ ಬಂದಿಲ್ಲ. ಹೀಗಾಗಿ ಮೂರನೇ ಪಂದ್ಯಕ್ಕೆ ಯುವ ವಿಕೆಟ್ ಕೀಪರ್ ಧ‍್ರುವ ಜ್ಯುರೆಲ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ.
ಇನ್ನು, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಫಿಟ್ ಆಗಿ ತಂಡಕ್ಕೆ ಮರಳುವ ಸಾಧ‍್ಯತೆಯಿದೆ. ರಾಹುಲ್ ಈಗಾಗಲೇ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಜಡೇಜಾಗೆ ಇದು ತವರಿನಲ್ಲಿ ನಡೆಯುತ್ತಿರುವ ಪಂದ್ಯವಾಗಿರುವುದರಿಂದ ವಿಶೇಷವಾಗಿದೆ. ಅವರೂ ಕೂಡಾ ಇತ್ತೀಚೆಗೆ ಫಿಟ್ನೆಸ್ ಗೆ ಮರಳುತ್ತಿರುವ ಸೂಚನೆ ನೀಡಿದ್ದರು.
ಮೂರನೇ ಪಂದ್ಯ ಆರಂಭವಾಗಲು ಇನ್ನೂ ಮೂರು ದಿನ ಬಾಕಿಯಿದೆ. ಹೀಗಾಗಿ ನಾಳೆಯಿಂದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.