ದುಬೈ: ಟಿ20 ವಿಶ್ವಕಪ್ ನಲ್ಲಿ ತಲಾ ಒಂದು ಪಂದ್ಯ ಸೋತಿರುವ ಭಾರತ ಮತ್ತು ನ್ಯೂಜಿಲೆಂಡ್ ಮುಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಈ ಎರಡೂ ಬಲಿಷ್ಠ ತಂಡಗಳಿಗೆ ಈಗ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಮುಂದಿನ ಹಾದಿ ಸುಗಮವಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಎರಡೂ ತಂಡಗಳಿವೆ. ಹೀಗಾಗಿ ಈ ಪಂದ್ಯಕ್ಕೆ ಸೆಮಿಫೈನಲ್ ನಷ್ಟು ಪ್ರಾಮುಖ್ಯತೆ ಬಂದಿದೆ.
ವಿಶೇಷವೆಂದರೆ ಎರಡೂ ತಂಡಗಳನ್ನು ಸೋಲಿಸಿದ್ದ ಪಾಕಿಸ್ತಾನ. ಪಾಕ್ ಈಗ ಗುಂಪು 2 ರಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಐದನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಮುಂದೆ ಉಳಿದ ಪಂದ್ಯಗಳಲ್ಲಿ ದುರ್ಬಲ ತಂಡಗಳಾದ ಅಫ್ಘಾನಿಸ್ತಾನ, ನಮೀಬಿಯಾ, ಸ್ಕಾಟ್ ಲ್ಯಾಂಡ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಉತ್ತಮ ರನ್ ಸರಾಸರಿಯೊಂದಿಗೆ ಗೆದ್ದರೆ ಮುಂದಿನ ಹಾದಿ ಸುಗಮವಾಗಲಿದೆ.