ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದ ಇಂಗ್ಲೆಂಡ್ ಸರಣಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಕಳೆದುಕೊಂಡಿದ್ದಾರೆ.
ಇದಕ್ಕೆ ಅವರ ಪ್ರಯೋಗದ ಹುಚ್ಚೇ ಕಾರಣ ಎನ್ನಬಹುದು. ವಿಶ್ವಕಪ್ ದೃಷ್ಟಿಯಿಂದ ಹೊಸಬರಿಗೆ, ಹೊಸತನದ ಪ್ರಯೋಗಕ್ಕೆ ಅವಕಾಶ ಕೊಡುವುದು ಒಳ್ಳೆಯದೇ ಆದರೂ, ನಿರ್ಣಾಯಕ ಪಂದ್ಯದಲ್ಲಿ ತಲೆ ಬುಡವಿಲ್ಲದ ನಿರ್ಧಾರಗಳಿಂದ ಟೀಂ ಇಂಡಿಯಾ ಸೋಲನುಭವಿಸಬೇಕಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾಗೆ ಎಂದಿನಂತೆ ಬಿರುಸಿನ ಆರಂಭ ದೊರಕಲಿಲ್ಲ. ನಿಧಾನಗತಿಯ ರನ್ ಮಾಡಿದ್ದಲ್ಲದೆ, ವಿಕೆಟ್ ಕೂಡಾ ಕಳೆದುಕೊಳ್ಳುತ್ತಾ ಹೋದ ಟೀಂ ಇಂಡಿಯಾ ಅಂತಿಮವಾಗಿ ಕೇವಲ 256 ರನ್ ಗಳಿಸಲಷ್ಟೇ ಶಕ್ತವಾಯಿತು. ವಿರಾಟ್ ಕೊಹ್ಲಿ 71 ರನ್ ಗಳಿಸಿದ್ದು ಬಿಟ್ಟರೆ ಧೋನಿ ಕುಂಟುತ್ತಾ 42, ಶಿಖರ್ ಧವನ್ 44 ರನ್ ಗಳಿಸಿದರು.
ಇತ್ತೀಚೆಗಿನ ದಿನಗಳಲ್ಲಿ ಇದು ದೊಡ್ಡ ಮೊತ್ತವೇನೂ ಅಲ್ಲ. ಅದೂ ಅಲ್ಲದೆ, ಜೋ ರೂಟ್ ನಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಗಳಿಗೆ ಇದು ಸವಾಲೇ ಆಗಿರಲಿಲ್ಲ. ಆರಾಮವಾಗಿ ಬ್ಯಾಟ್ ಬೀಸುತ್ತಾ ಹೋಸ ರೂಟ್-ಮಾರ್ಗನ್ ಜೋಡಿ ಕೇವಲ 2 ವಿಕೆಟ್ ನಷ್ಟಕ್ಕೆ 44 ಓವರ್ ಗಳಲ್ಲೇ ಗುರಿ ಮುಟ್ಟಿತು. ರೂಟ್ ಶತಕ ಗಳಿಸಿದರೆ ಮಾರ್ಗನ್ 88 ರನ್ ಗಳಿಸಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆಎಲ್ ರಾಹುಲ್ ರನ್ನು ಕಣಕ್ಕಿಳಿಸದೇ ದಿನೇಶ್ ಕಾರ್ತಿಕ್ ಗೆ ಮಣೆ ಹಾಕಿದ್ದು, ಚರ್ಚಾಸ್ಪದವಾಯಿತು. ಇನ್ನು, ಅನುಭವಿ ಉಮೇಶ್ ಯಾದವ್ ಬದಲಿಗೆ ಶ್ರಾದ್ಧೂಲ್ ಠಾಕೂರ್ ಗೆ ಮಣೆ ಹಾಕಲಾಯಿತು. ವಿಕೆಟ್ ಕಳೆದುಕೊಳ್ಳುತ್ತಿರುವಾಗಲೂ ಧೋನಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡದೇ ಕೊಹ್ಲಿ ತಪ್ಪು ಮಾಡಿದರು. ಇದೆಲ್ಲಾ ಪ್ರಯೋಗಗಳ ಹುಚ್ಚಿನಲ್ಲಿ ಭಾರತ ಸರಣಿಯನ್ನೇ ಕಳೆದುಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.