ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 51 ರನ್ ಗಳಿಂದ ಗೆದ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.
ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಆಸೀಸ್ ಭಾರತಕ್ಕೆ 390 ರನ್ ಗಳ ಬೃಹತ್ ಮೊತ್ತ ನೀಡಿತ್ತು. ಈ ಮೊತ್ತ ಬೆನ್ನತ್ತುವಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಶತಾಯ ಗತಾಯ ಪ್ರಯತ್ನ ನಡೆಸಿದರೂ ದೊಡ್ಡ ಜತೆಯಾಟಗಳು ಬಾರದೇ ಸೋಲಬೇಕಾಯಿತು. ನಾಯಕ ವಿರಾಟ್ ಕೊಹ್ಲಿ 89, ಕೆಎಲ್ ರಾಹುಲ್ 76, ಶ್ರೇಯಸ್ ಐಯರ್ 38, ಶಿಖರ್ ಧವನ್ 30, ಮಯಾಂಕ್ ಅಗರ್ವಾಲ್ 28 ರನ್ ಗಳಿಸಿದರು.
ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 28, ರವೀಂದ್ರ ಜಡೇಜಾ 24 ರನ್ ಗಳಿಸಿದರು. ಇವರು ಔಟಾದೊಡನೆ ಭಾರತ ವಿಕೆಟ್ ಗಳು ತರಗಲೆಯಂತೆ ಉರುಳಿದವು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಭಾರತ ಇನ್ನೂ ಒಂದು ಪಂದ್ಯ ಬಾಕಿಯಿರುವಂತೇ ಸೋತಿತು.