ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಈಗಾಗಲೇ ವಿಜೇತರು ಯಾರೆಂದು ತೀರ್ಮಾನವಾಗಿದೆ. ಹಾಗಿದ್ದರೂ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಮಹತ್ವದ್ದೇ ಆಗಿದೆ.
ಸರಣಿ ಗೆದ್ದರೂ ಭಾರತ ತಂಡ ಇದುವರೆಗೆ ಸಂಘಟಿತ ಪ್ರದರ್ಶನ ನೀಡಿಲ್ಲ. ಪ್ರತೀ ಪಂದ್ಯದ ಗೆಲುವಿಗೂ ಒಬ್ಬರೋ, ಇಬ್ಬರೋ ಬ್ಯಾಟ್ಸ್ ಮನ್ ಗಳಷ್ಟೇ ಕೊಡುಗೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿದ್ದು ಬಿಟ್ಟರೆ ಈ ಸರಣಿಯಲ್ಲಿ ಸರಾಗವಾಗಿ ರನ್ ಗಳಿಸಿದ್ದು ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಮಾತ್ರ.
ಧೋನಿ, ಹಾರ್ದಿಕ್ ಪಾಂಡ್ಯ, ಅಜಿಂಕ್ಯಾ ರೆಹಾನೆ ಬ್ಯಾಟಿಂಗ್ ಸದ್ದು ಮಾಡಿಯೇ ಇಲ್ಲ. ಹೀಗಾಗಿ ಮಧ್ಯಮ ಕ್ರಮಾಂಕ ಸೊರಗಿದೆ. ಈ ಹುಳುಕು ಹೋಗಬೇಕಾದರೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಘಟಿತ ಪ್ರದರ್ಶನ ನೀಡಲೇಬೇಕು. ಉಳಿದಂತೆ ಸ್ಪಿನ್ನರ್ ಗಳೇ ಭಾರತದ ಆಸ್ಥಿ.
ಈಗಾಗಲೇ ವಿರಾಟ್ ಕೊಹ್ಲಿ ಔಪಚಾರಿಕ ಪಂದ್ಯವೆಂದು ಹಗುರವಾಗಿ ಕಾಣುವುದಿಲ್ಲ ಎಂದಿದ್ದಾರೆ. ಹಾಗಾಗಿ ಕನ್ನಡಿಗ ಮನೀಶ್ ಪಾಂಡೆ ಸೇರಿದಂತೆ ಇದುವರೆಗೆ ಅವಕಾಶ ಸಿಗದ ಆಟಗಾರರನ್ನು ಕಣಕ್ಕಿಳಿಸುವುದು ಅನುಮಾನ. ಒಂದು ವೇಳೆ ಭಾರತ ಇಂದು ಗೆದ್ದರೆ ಇದು ವಿದೇಶಗಳಲ್ಲಿ ಭಾರತದ ಅತೀ ದೊಡ್ಡ ಅಂತರದ ಸರಣಿ ಗೆಲುವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ