ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿ ಸಮಾಧಾನಕರ ಮೊತ್ತ ಪೇರಿಸಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಪೈಕಿ ಈ ಪಂದ್ಯದಲ್ಲಿ ರಾಹುಲ್ ಕೇವಲ 13 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಡೆದರೆ ಮಯಾಂಕ್ 55 ರನ್ ಗಳಿಸಿ ಮಿಂಚಿದರು.
ಬಳಿಕ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ ಮತ್ತೊಂದು ವೈಫಲ್ಯಕ್ಕೆ ಗುರಿಯಾದರು. ಅವರು ಈ ಬಾರಿ ಕೇವಲ 6 ರನ್ ಗೆ ವಿಕೆಟ್ ಕಳೆದುಕೊಂಡರು. ಬಳಿಕ ನಾಯಕ ವಿರಾಟ್ ಕೊಹ್ಲಿ ಎಂದಿನ ಆಟವಾಡಿದರೂ ದುರದೃಷ್ಟವಶಾತ್ 76 ರನ್ ಗಳಿಸುವಷ್ಟರಲ್ಲಿ ಹೋಲ್ಡರ್ ಗೆ ವಿಕೆಟ್ ಒಪ್ಪಿಸಿದರು. ಅಜಿಂಕ್ಯಾ ರೆಹಾನೆ 24 ರನ್ ಗಳಿಗೆ ಔಟಾದರು.
ದಿನದಂತ್ಯಕ್ಕೆ ಉತ್ತಮ ಲಯದಲ್ಲಿದ್ದ ಹನುಮ ವಿಹಾರಿ 42 ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ 27 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ವಿಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ 3 ವಿಕೆಟ್ ಕಬಳಿಸಿದರೆ ರೋಚ್ ಮತ್ತು ಕಾರ್ನ್ ವಾಲ್ ತಲಾ 1 ವಿಕೆಟ್ ಕಬಳಿಸಿದರು.