ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಹಲವು ದಾಖಲೆಗಳು ಮುರಿದು ಬೀಳುವ ನಿರೀಕ್ಷೆಯಿದೆ.
ಮೊದಲನೆಯದಾಗಿ ನಾಯಕರಾಗಿ ಕೊಹ್ಲಿಗೆ ಈ ಪಂದ್ಯದ ಮಹತ್ವದ ಮೈಲಿಗಲ್ಲು ಸಾಧಿಸಲಿರುವ ಪಂದ್ಯ. ಈ ಪಂದ್ಯವನ್ನು ಗೆದ್ದರೆ ಭಾರತದ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ದಾಖಲೆ ಕೊಹ್ಲಿ ಪಾಲಾಗಲಿದೆ.
ಇನ್ನು, ಹಿರಿಯ ವೇಗಿ ಇಶಾಂತ್ ಶರ್ಮಾಗೆ ಕಪಿಲ್ ದೇವ್ ದಾಖಲೆಯನ್ನು ಮುರಿಯಲು ಇನ್ನೊಂದು ವಿಕೆಟ್ ಬೇಕಾಗಿದೆ. ಏಷ್ಯಾದ ಹೊರಗಿನ ರಾಷ್ಟ್ರಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ದಾಖಲೆ ಪಟ್ಟಿಯಲ್ಲಿ ಸದ್ಯಕ್ಕೆ ಅನಿಲ್ ಕುಂಬ್ಳೆ 200 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ 155 ದಾಖಲೆಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಅವರೊಂದಿಗೆ ಅಷ್ಟೇ ವಿಕೆಟ್ ಪಡೆದ ಇಶಾಂತ್ ಶರ್ಮಾ ಕೂಡಾ ದ್ವಿತೀಯ ಸ್ಥಾನಿಯಾಗಿದ್ದಾರೆ. ಇದೀಗ ಒಂದು ವಿಕೆಟ್ ಪಡೆದರೆ ಇಶಾಂತ್, ಕಪಿಲ್ ರನ್ನು ಮೂರನೇ ಸ್ಥಾನಕ್ಕೆ ತಳ್ಳಿ ತಾವೇ ದ್ವಿತೀಯ ಸ್ಥಾನಿಯಾಗಲಿದ್ದಾರೆ.
ಇನ್ನು, ರವಿಚಂದ್ರನ್ ಅಶ್ವಿನ್ ಕೂಡಾ ವಿಶ್ವದಾಖಲೆ ಮಾಡುವ ಅವಕಾಶ ಪಡೆದಿದ್ದಾರೆ.ಆದರೆ ಅದು ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕರೆ ಮಾತ್ರ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ 350 ವಿಕೆಟ್ ಪಡೆದ ದಾಖಲೆ ಅಶ್ವಿನ್ ಪಾಲಾಗಲು ಇನ್ನು 8 ವಿಕೆಟ್ ಬೇಕಾಗಿದೆ. ಸದ್ಯಕ್ಕೆ ಈ ದಾಖಲೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 66 ಪಂದ್ಯಗಳಿಂದ ಈ ದಾಖಲೆ ಮಾಡಿದ್ದರು. ಅಶ್ವಿನ್ ಕೂಡಾ ಈ ಪಂದ್ಯದಲ್ಲಿ ಆಡಿ ಆ ದಾಖಲೆ ಮಾಡಿದರೆ ಮುರಳೀಧರನ್ ದಾಖಲೆ ಸರಿಗಟ್ಟಲಿದ್ದಾರೆ.