ನ್ಯೂಯಾರ್ಕ್: ಅಮೆರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅಮೆರಿಕಾ ಇನಿಂಗ್ಸ್ ನ ಮೊದಲ ಓವರ್ ನ್ನು ಅರ್ಷ್ ದೀಪ್ ಸಿಂಗ್ ಮಾಡಿದರು. ಮೊದಲ ಎಸೆತದಲ್ಲೇ ಶಯಾನ್ ಜಹಾಂಗೀರ್ ಮೊದಲ ಎಸೆತಕ್ಕೇ ಔಟಾದರು. ಇದು ಇನಿಂಗ್ಸ್ ನ ಮೊದಲ ಬಾಲ್ ಆಗಿತ್ತು.
ಈ ಮೂಲಕ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಬಾಲ್ ನಲ್ಲೇ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಅಪರೂಪದ ದಾಖಲೆಯನ್ನು ಅರ್ಷ್ ದೀಪ್ ಮಾಡಿದರು. ಜಾಗತಿಕವಾಗಿ ಅವರು ಈ ಸಾಧನೆ ಮಾಡಿದ ಐದನೇ ಬೌಲರ್ ಆಗಿದ್ದಾರೆ. ಇದೇ ವಿಶ್ವಕಪ್ ನಲ್ಲಿ ಒಮನ್ ವಿರುದ್ಧ ನಮೀಬಿಯಾದ ರುಬೆನ್ ಟ್ರಂಪ್ಲ್ ಮಾನ್ ಈ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ ರುಬೆನ್ 2021 ವಿಶ್ವಕಪ್ ನಲ್ಲೂ ಸ್ಕಾಟ್ ಲ್ಯಾಂಡ್ ವಿರುದ್ಧ ಈ ದಾಖಲೆ ಮಾಡಿದ್ದರು. ಅವರನ್ನು ಬಿಟ್ಟರೆ 2014 ರ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶದ ಮುಶ್ರಫೆ ಮೋರ್ತಜ ಮತ್ತು ಅಫ್ಘಾನಿಸ್ತಾನದ ಶಪೂರ್ ಜಡ್ರಾನ್ ಈ ದಾಖಲೆ ಮಾಡಿದ್ದರು.