ಗಯಾನ: ಟಿ20 ವಿಶ್ವಕಪ್ ನಲ್ಲಿ ಇಂದು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆ ಬಂದರೆ ಏನಾಗಬಹುದು ನೋಡಿ.
ಈ ಬಾರಿ ಸೆಮಿಫೈನಲ್ ಪಂದ್ಯ ರದ್ದಾದರೆ ಮೀಸಲು ದಿನವಿಲ್ಲ. ಬದಲಾಗಿ ಪಂದ್ಯ ಕೆಲವು ಗಂಟೆಗಳ ಕಾಲ ವಿಸ್ತರಣೆಯಾಗಬಹುದು. ಅದರ ಹೊರತಾಗಿಯೂ ಮಳೆ ಬಂದು ಆಟವಾಡಲು ಸಾಧ್ಯವಾಗದೇ ಹೋದರೆ ಪಂದ್ಯ ರದ್ದು ಮಾಡುವುದೊಂದೇ ದಾರಿ. ಸದ್ಯದ ಹವಾಮಾನ ವರದಿ ಪ್ರಕಾರ ಗಯಾನದಲ್ಲಿ ಇಂದು ಮಳೆ ಬರುವ ಸಾಧ್ಯತೆಯಿದೆ. ಹೀಗಾದಲ್ಲಿ ಪಂದ್ಯ ನಡೆಯುವುದು ಕಷ್ಟ.
ಆದರೆ ಇದರಿಂದ ಲಾಭವಾಗಲಿರುವುದು ಭಾರತಕ್ಕೆ. ಈಗಾಗಲೇ ಗುಂಪು 1 ರಲ್ಲಿ ಅಗ್ರಸ್ಥಾನಿಯಾಗಿರುವ ಭಾರತ 2 ಪ್ಲಸ್ ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ಭಾರತ ಸಹಜವಾಗಿಯೇ ಫೈನಲ್ ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಪಂದ್ಯ ರದ್ದಾದರೆ ಟೀಂ ಇಂಡಿಯಾ ನಿರಾಯಾಸವಾಗಿ ಫೈನಲ್ ಗೇರಲಿದೆ. ಹೀಗಾಗಿ ಮಳೆ ಬಂದರೂ ಟೀಂ ಇಂಡಿಯಾಕ್ಕೆ ಯಾವುದೇ ನಷ್ಟವಾಗದು.
ಸ್ಥಳೀಯ ಸಮಯದ ಪ್ರಕಾರ ಸಂಜೆ 10.30 ಕ್ಕೆ ಪಂದ್ಯ ಆರಂಭವಾಗಲಿದೆ. ಆದರೆ ಈ ವೇಳೆ ಮಳೆ ಬರುವ ಸಾಧ್ಯತೆ ಶೇ.60 ರಷ್ಟಿದೆ. ಸ್ಥಳೀಯ ಸಮಯ 12 ಗಂಟೆಗೆ ಪ್ರಕಾರ ಮಳೆ ಬರುವ ಸಾಧ್ಯತೆ ಶೇ.50 ರಷ್ಟಿದೆ. ಹೀಗಾಗಿ ವರುಣ ಕೃಪೆ ತೋರಿದರೆ ಇಂದು ಪಂದ್ಯ ನಡೆಯಬಹುದು.