ಗಯಾನ: ಟಿ20 ವಿಶ್ವಕಪ್ 2024 ರಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಇದುವರೆಗೆ ಹೇಳಿಕೊಳ್ಳುವಂತಹ ರನ್ ಬಂದಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಮಾತ್ರ ಕೊಹ್ಲಿಯನ್ನು ಬಿಟ್ಟುಕೊಟ್ಟಿಲ್ಲ.
ಸೆಮಿಫೈನಲ್ ನಲ್ಲಿ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟಾದರು. ಇದರಿಂದ ಅಭಿಮಾನಿಗಳಿಗೆ ತೀರಾ ನಿರಾಸೆಯಾಗಿದೆ. ಮಾಜಿ ಕ್ರಿಕೆಟಿಗರೂ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೆಲವರು ಕೊಹ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ಮೊದಲಿನಂತೆ ಮೂರನೇ ಕ್ರಮಾಂಕಕ್ಕೆ ಶಿಫ್ಟ್ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ.
ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾತ್ರ ಕೊಹ್ಲಿ ಮೇಲೆ ವಿಶ್ವಾಸವಿಟ್ಟುಕೊಂಡಿದೆ. ಸೆಮಿಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ರೋಹಿತ್ ಶರ್ಮಾಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಕ್ಲಾಸ್ ಆಟಗಾರ. ಅವರಿಗೆ ಫಾರ್ಮ್ ಒಂದು ಸಮಸ್ಯೆಯೇ ಅಲ್ಲ. ದೊಡ್ಡ ಪಂದ್ಯಗಳಲ್ಲಿ ಅವರು ಹೇಗೆ ಆಡುತ್ತಾರೆ ಎಂದು ನಮಗೆ ಗೊತ್ತು. ಅವರು ಫೈನಲ್ ಗಾಗಿ ಆ ಪ್ರದರ್ಶನವನ್ನು ಕಾದಿರಿಸಿದ್ದಾರೆ ಎಂದು ರೋಹಿತ್ ನಗುತ್ತಾ ಹೇಳಿದ್ದಾರೆ.
ಆ ಮೂಲಕ ಕೊಹ್ಲಿ ಫೈನಲ್ ನಲ್ಲಿ ದೊಡ್ಡ ಇನಿಂಗ್ಸ್ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುವುದರ ಜೊತೆಗೆ ಎದುರಾಳಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಟಿ20 ವಿಶ್ವಕಪ್ ಫೈನಲ್ ಪಂದ್ಯ ನಾಳೆ ಭಾರತ ಮತ್ತು ದ ಆಫ್ರಿಕಾ ನಡುವೆ ಬಾರ್ಬಡೋಸ್ ನಲ್ಲಿ ನಡೆಯಲಿದೆ.