ಕೋಲ್ಕೊತ್ತಾ: ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರೂ ಆಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮೇಲೆ ಬಂದಿರುವ ಮೀ ಟೂ ಆರೋಪದ ಬಗ್ಗೆ ಬಿಸಿಸಿಐಗೆ ಈಮೇಲ್ ರವಾನಿಸಿದ್ದಾರೆ.
ಗಂಗೂಲಿ ತಮ್ಮ ಈಮೇಲ್ ನಲ್ಲಿ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರಲ್ಲದೆ, ಬಿಸಿಸಿಐನಲ್ಲಿ ಸದ್ಯಕ್ಕಿರುವ ನಾಯಕತ್ವದ ಗೊಂದಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದು ಸತ್ಯವೋ, ಸುಳ್ಳೋ ಎಂದು ನನಗೆ ಗೊತ್ತಿಲ್ಲ. ಆದರೆ ಇತ್ತೀಚೆಗೆ ಸಿಇಒ ರಾಹುಲ್ ಜೋಹ್ರಿ ಮೇಲೆ ಬಂದಿರುವ ಲೈಂಗಿಕ ಕಿರುಕುಳ ಆರೋಪ ನಿಜಕ್ಕೂ ಗಂಭೀರವಾದುದು, ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ನನ್ನು ಆರಾಧಿಸುವ ಕೋಟ್ಯಂತರ ಪ್ರೇಮಿಗಳ ಭಾವನೆಗೆ ಧಕ್ಕೆ ತರುವಂತದ್ದು ಎಂದು ಗಂಗೂಲಿ ಬಿಸಿಸಿಐ ಕಾರ್ಯನಿರ್ವಾಹಕ ಅಧ್ಯಕ್ಷ ಸಿಕೆ ಖನ್ನಾ, ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಖಜಾಂಜಿ ಅನಿರುದ್ಧ್ ಚೌಧರಿಗೆ ಈಮೇಲ್ ಮೂಲಕ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲದೆ, ಬಿಸಿಸಿಐನಲ್ಲಿ ಈಗ ನಾಯಕತ್ವದ್ದೇ ಸಮಸ್ಯೆ. ಬಿಸಿಸಿಐಗೆ ನಿಜವಾದ ಬಾಸ್ ಯಾರು ಎಂಬ ಗೊಂದಲವಿದೆ. ಹಲವು ವಿದೇಶೀ ಅಸೋಸಿಯೇಷನ್ ನ ಸ್ನೇಹಿತರು ನನ್ನ ಬಳಿ ಬಿಸಿಸಿಐನಲ್ಲಿ ಯಾರಿಗೆ ಅಧಿಕೃತ ಆಹ್ವಾನ ನೀಡಬೇಕು ಎಂದು ಕೇಳುತ್ತಿದ್ದಾರೆ. ಆದರೆ ನಾನು ಏನೆಂದು ಉತ್ತರಿಸಲಿ? ಇದು ಕಳವಳಕಾರಿ ಎಂದು ಗಂಗೂಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.