ನವದೆಹಲಿ: ಇಷ್ಟು ದಿನ ಡಬ್ಲ್ಯುಪಿಎಲ್ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿತ್ತು. ಇಲ್ಲಿನ ಹುಡುಗರು ಮಹಿಳಾ ಪ್ರೀಮಿಯರ್ ಲೀಗ್ ಗೆ ಅದ್ಭುತ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲೂ ಆರ್ ಸಿಬಿ ಮ್ಯಾಚ್ ಎಂದರೆ ಮೈದಾನ ಭರ್ತಿಯಾಗುತ್ತಿತ್ತು.
ಬರೀ ವೀಕೆಂಡ್ ನಲ್ಲಿ ಮಾತ್ರವಲ್ಲ, ವಾರದ ದಿನಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಬಂದರೆ ಮೈದಾನ ಭರ್ತಿಯಾಗುತ್ತಿತ್ತು. ಇದು ಆರ್ ಸಿಬಿ ಹುಡುಗಿಯರನ್ನು ಭಾವುಕರನ್ನಾಗಿಸಿದೆ. ಕೊನೆಯ ಪಂದ್ಯವಾಡಿದ ಬಳಿಕ ಸ್ಮೃತಿ ಮಂಧಾನ ಪಡೆ ಮೈದಾನಕ್ಕೆ ಸುತ್ತು ಬಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ. ಅದರಲ್ಲೂ ಸೋಫಿ ಡಿವೈನ್ ಅಂತೂ ಡೈವ್ ಹೊಡೆದು ವಿಶಿಷ್ಟವಾಗಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಅದು ನಮ್ಮ ಬೆಂಗಳೂರು ಹುಡುಗರ ತಾಕತ್ತು. ಮಹಿಳೆಯರ ಕ್ರಿಕೆಟ್ ನ್ನು ಯಾರು ನೋಡ್ತಾರೆ ಎಂದು ಅಸಡ್ಡೆ ಮಾಡುವವರಿಗೆ ಇಲ್ಲಿನ ಪ್ರೇಕ್ಷಕರು ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಇದೀಗ ಡಬ್ಲ್ಯುಪಿಎಲ್ ಪಂದ್ಯಗಳು ದೆಹಲಿಗೆ ಶಿಫ್ಟ್ ಆಗಿದೆ. ಆದರೆ ಅಲ್ಲಿಯೂ ಇದೇ ರೀತಿ ಬೆಂಬಲ ಸಿಗಬಹುದಾ ಎಂದು ಸ್ಮೃತಿ ಮಂಧಾನ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ನಮಗೆ ಇಷ್ಟು ಬೆಂಬಲ ಸಿಗಬಹುದಾ ಗೊತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಅವಿಸ್ಮರಣೀಯ. ಅದರಲ್ಲೂ ನಮ್ಮ ಪಂದ್ಯಗಳಿಗೆ ಜನ ಕಿಕ್ಕಿರಿದು ಬಂದಿದ್ದರು. ಬೆಂಗಳೂರಿಗೆ ವಿಧೇಯ ಅಭಿಮಾನಿಗಳ ಬಳಗವಿದೆ ಎಂದು ಕೇಳಿದ್ದೆ. ಆದರೆ ಈ ಬಾರಿ ಅದನ್ನು ನಾವು ನಿಜಕ್ಕೂ ಅನುಭವಿಸಿದೆವು. ಕಳೆದ 15 ದಿನಗಳಲ್ಲಿ ನಮಗೆ ಬೆಂಗಳೂರು ಸುತ್ತಾಡಲೂ ಸಾಧ‍್ಯವಾಗಿಲ್ಲ. ಅಷ್ಟು ಫ್ಯಾನ್ಸ್ ನಮ್ಮನ್ನು ಹಿಂಬಾಲಿಸಿದ್ದಾರೆ. ಇದು ಕೇವಲ ನನಗೆ, ಆರ್ ಸಿಬಿಗೆ ಸಿಕ್ಕ ಗೆಲುವುಲ್ಲ. ಇಡೀ ಮಹಿಳಾ ಕ್ರಿಕೆಟ್ ಗೆ ಸಿಕ್ಕ ಗೆಲುವು. ಹಿಂದೆ ಪುರುಷರ ಕ್ರಿಕೆಟ್ ಪಂದ್ಯ ವೀಕ್ಷಿಸಲು ಇಲ್ಲಿಗೆ ಬಂದಿದ್ದಾಗ ಇಷ್ಟೇ ಜನರನ್ನು ನೋಡಿದ್ದೆ. ಈಗ ಮಹಿಳೆಯರ ಕ್ರಿಕೆಟ್ ಗೂ ಇವರ ಪ್ರೀತಿ ಅಷ್ಟೇ ಇದೆ ಎಂದು ನೋಡಿ ಅಭಿಮಾನವಾಯಿತು ಎಂದಿದ್ದಾರೆ.