ಇಸ್ಲಾಮಾಬಾದ್: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಈಗ ಪಾಕ್ ನಟಿ ಸನಾ ಜಾವೇದ್ ಜೊತೆ ವಿವಾಹವಾಗಿದ್ದಾರೆ. ಇದು ಫ್ಯಾನ್ಸ್ ಗೆ ನಿಜಕ್ಕೂ ಶಾಕಿಂಗ್ ಆಗಿದೆ.
ಇತ್ತೀಚೆಗಷ್ಟೇ ಸಾನಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮದುವೆ ಕಷ್ಟ, ವಿಚ್ಛೇದನ ಇನ್ನೂ ಕಷ್ಟ ಎಂದು ಪೋಸ್ಟ್ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ದಂಪತಿ ಎಲ್ಲೂ ತಮ್ಮ ವಿಚ್ಛೇದನದ ಬಗ್ಗೆ ನೇರವಾಗಿ ಬಾಯ್ಬಿಟ್ಟಿರಲಿಲ್ಲ.
ಆದರೆ ಇದೀಗ ಶೊಯೇಬ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸನಾ ಜಾವೇದ್ ಜೊತೆಗಿನ ಮದುವೆ ಫೋಟೋಗಳನ್ನು ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಈ ಮೂಲಕ ಸಾನಿಯಾ-ಶೊಯೇಬ್ ದೂರವಾಗಿರುವುದು ಅಧಿಕೃತವಾಗಿದೆ.
ಶೊಯೇಬ್ ಕೈ ಹಿಡಿದಿರುವ ಸನಾ ಜಾವೇದ್ ಪಾಕಿಸ್ತಾನದ ಕಿರುತೆರೆ ನಟಿ. ಈಕೆ 2020 ರಲ್ಲಿ ಪಾಕ್ ನಟ, ಗಾಯಕ ಉಮೈರ್ ಜಸ್ವಾಲ್ ಜೊತೆ ವಿವಾಹವಾಗಿದ್ದರು. ಇವರೂ ಕೂಡಾ ವಿಚ್ಛೇದನದ ಸುದ್ದಿಯನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಈಗ ಏಕಾಏಕಿ ಶೊಯೇಬ್-ಸನಾ ಮದುವೆಯಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.