ನವದೆಹಲಿ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬದ ಮಕ್ಕಳಿಗೆ ತಮ್ಮ ಸೆಹ್ವಾಗ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದಾರೆ.
ಮೊನ್ನೆ ನಡೆದಿದ್ದ ರೈಲು ದುರಂತಕ್ಕೆ ಸೆಹ್ವಾಗ್ ಸಂತಾಪ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಅಷ್ಟಕ್ಕೇ ಸುಮ್ಮನಾಗದ ಅವರು ಈಗ ನಾವು ಮಾಡಬಹುದಾದ ಕೆಲಸವೆಂದರೆ ಮೃತಪಟ್ಟವರ ಕುಟುಂಬಗಳಿಗೆ ನೆರವಾಗುವುದು. ಹೀಗಾಗಿ ಮೃತಪಟ್ಟವರ ಕುಟುಂಬಸ್ಥರ ಮಕ್ಕಳಿಗೆ ನಮ್ಮ ಸೆಹ್ವಾಗ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಉಚಿತ ಶಿಕ್ಷಣ ಸೌಲಭ್ಯ ನೀಡುತ್ತೇವೆ ಎಂದು ಘೋಷಿಸಿದ್ದಾರೆ.
ಈ ಮೊದಲು ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟಿದ್ದ ಸೈನಿಕರ ಕುಟುಂಬಸ್ಥರಿಗೂ ಸೆಹ್ವಾಗ್ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಿದ್ದರು. ಇದೀಗ ಮತ್ತೆ ಮಾನವೀಯತೆ ಮೆರೆದಿದ್ದಾರೆ.