ಮುಂಬೈ: ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಕ್ರಿಕೆಟಿಗ, ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಭಾರತ ರತ್ನ ಸಚಿನ್ ತೆಂಡುಲ್ಕರ್ ಅವರ ಪ್ರತಿಮೆ ಅವರ ತವರು ಮುಂಬೈನ ವಾಂಖೆಡೆ ಮೈದಾನದಲ್ಲಿ ನಾಳೆ ಉದ್ಘಾಟನೆಯಾಗಲಿದೆ.
ಗುರುವಾರ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಇದಕ್ಕೆ ಮೊದಲು ಸಚಿನ್ ಅವರ ಜೀವನಗಾಥೆ ವಿವರಿಸುವ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸ್ವತಃ ಸಚಿನ್ ಆಗಮಿಸಲಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಚಿನ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಜೊತೆಗೆ ಬಿಸಿಸಿಐ ಪದಾಧಿಕಾರಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಭಾಗಿಯಾಗುವ ನಿರೀಕ್ಷೆಯಿದೆ.
ಸಚಿನ್ ಪ್ರತಿಮೆ 22 ಅಡಿ ಎತ್ತರವಿದ್ದು ಖ್ಯಾತ ಶಿಲ್ಪ ಕಲಾವಿದ ಪ್ರಮೋದ್ ಕಾಳೆ ವಿನ್ಯಾಸಗೊಳಿಸಿದ್ದಾರೆ. ನಾಳೆಯಿಂದಲೇ ಪ್ರತಿಮೆ ಸಾರ್ವಜನಿಕ ದರ್ಶನಕ್ಕೆ ಲಭ್ಯವಿರಲಿದೆ.