ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ರೋಚಕ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮನಬಿಚ್ಚಿ ಮಾತನಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂದರ್ಶನದಲ್ಲಿ ರೋಹಿತ್, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ಎಂದರೆ ನಮಗೆ ಯಾವತ್ತೂ ದೊಡ್ಡ ಸವಾಲು ಎಂದಿದ್ದಾರೆ. ನಾವು ಒತ್ತಡವನ್ನು ಮೈಮೇಲೆಳೆದುಕೊಳ್ಳುವ ಬದಲು ಇದೂ ಕೂಡಾ ಇನ್ನೊಂದು ಪಂದ್ಯದಂತೆ ಒಂದು ಸಾಮಾನ್ಯ ಪಂದ್ಯವಷ್ಟೇ ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಟಿ20 ವಿಶ್ವಕಪ್ ಗಳಲ್ಲಿ ಭಾರತ ಪಾಕ್ ವಿರುದ್ಧ 6-1 ಅಂತರದ ಗೆಲುವಿನ ದಾಖಲೆ ಹೊಂದಿದೆ. ನಾಳೆ ಮತ್ತೊಮ್ಮೆ ಗೆದ್ದು ಆ ದಾಖಲೆಯನ್ನು ಉತ್ತಮಪಡಿಸುವ ನಿರೀಕ್ಷೆಯಲ್ಲಿ ರೋಹಿತ್ ಬಳಗವಿದೆ. ಇದು ಈ ಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ ಎರಡನೆಯ ಲೀಗ್ ಪಂದ್ಯವಾಗಿದೆ. ಮೊದಲ ಲೀಗ್ ಪಂದ್ಯದಲ್ಲಿ ಭಾರತ ದುರ್ಬಲ ಐರ್ಲೆಂಡ್ ವಿರುದ್ಧ ಗೆದ್ದು ಬೀಗಿತ್ತು.
ನಾಳೆಯ ಪಂದ್ಯವನ್ನು ಗೆದ್ದರೆ ಭಾರತದ ನಾಕೌಟ್ ಹಂತದ ಹಾದಿ ಸುಗಮವಾಗಲಿದೆ. ವಿಶ್ವಕಪ್ ಪಂದ್ಯಾವಳಿ ಎಂದರೆ ಯಾವತ್ತೂ ವಿಶೇಷ ಅನುಭವ ಕೊಡುತ್ತದೆ. ಒಂದು ರೀತಿಯ ಅಳುಕು ಮನೆ ಮಾಡಿರುತ್ತದೆ. ಆದರೆ ಆ ಕ್ಷಣವನ್ನು ನಾನು ಎಂಜಾಯ್ ಮಾಡುತ್ತೇನೆ. ಅದನ್ನು ಅನುಭವಿಸುವುದೇ ಒಂದು ಅದೃಷ್ಟ ಎಂದು ರೋಹಿತ್ ಹೇಳಿದ್ದಾರೆ.