ಮುಂಬೈ: ಮುಂಬೈ ಇಂಡಿಯನ್ಸ್ ನಾಯಕರಾಗಿ ರೋಹಿತ್ ಶರ್ಮಾ ಹಿಂದೆ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯರನ್ನು ಕಾಪಾಡಿದ್ದ ಘಟನೆಯನ್ನು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ನೆನೆಸಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಆದರೆ 2015 ರಲ್ಲಿ ಅವರ ಪ್ರದರ್ಶನ ಚೆನ್ನಾಗಿರಲಿಲ್ಲ. ಹೀಗಾಗಿ ಮುಂಬೈ ಫ್ರಾಂಚೈಸಿ ಅವರನ್ನು ತಂಡದಿಂದಲೇ ಕೈ ಬಿಡಲು ತೀರ್ಮಾನಿಸಿತ್ತು. ಆದರೆ ಅವರನ್ನು ಅರ್ಧದಲ್ಲೇ ಕೈ ಬಿಡದಂತೆ ರೋಹಿತ್ ಫ್ರಾಂಚೈಸಿ ಮನವೊಲಿಸಿದರು. ರೋಹಿತ್ ಬೆಂಬಲದಿಂದಾಗಿ ಬುಮ್ರಾ ತಂಡದಲ್ಲೇ ಉಳಿದುಕೊಳ್ಳುವಂತಾಯಿತು. ಬಳಿಕ ಬುಮ್ರಾ ಅತ್ಯಂತ ಪ್ರಮುಖ ವೇಗಿಯಾಗಿ ಬೆಳೆದರು.
ಇದೇ ರೀತಿ ಹಾರ್ದಿಕ್ ಪಾಂಡ್ಯ ವಿಚಾರದಲ್ಲೂ ಆಗಿತ್ತು. 2015 ರಲ್ಲಿ ಪಾಂಡ್ಯ ಮುಂಬೈಗೆ ಬಂದರು. ಆದರೆ 2016 ರ ಸೀಸನ್ ಅವರ ಪಾಲಿಗೆ ಕೆಟ್ಟದಾಗಿತ್ತು. ಅವರನ್ನೂ ಫ್ರಾಂಚೈಸಿ ರಿಲೀಸ್ ಮಾಡುವ ಯೋಜನೆಯಲ್ಲಿತ್ತು. ಆದರೆ ಮತ್ತ ರೋಹಿತ್ ಶರ್ಮಾ ಅವರನ್ನೂ ಕಾಪಾಡಿದರು.
ಅಂದು ರೋಹಿತ್ ಈ ಇಬ್ಬರೂ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದಕ್ಕೇ ಇಂದು ಇಬ್ಬರೂ ಸ್ಟಾರ್ ಗಳಾಗಿ ಬೆಳೆದಿದ್ದಾರೆ. ಬಹುಶಃ ರೋಹಿತ್ ಬೆಂಬಲಿಸದೇ ಇದ್ದಿದ್ದರೆ ಎಲ್ಲೋ ರಣಜಿ ಆಡಿಕೊಂಡಿರಬೇಕಿತ್ತು. ಆದರೆ ರೋಹಿತ್ ಈ ಇಬ್ಬರನ್ನೂ ಬೆಳೆಸಲು ಕಾರಣರಾದರು ಎಂದು ಪಾರ್ಥಿವ್ ಪಟೇಲ್ ಹೇಳಿಕೊಂಡಿದ್ದಾರೆ.