ಮುಂಬೈ: ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಬರಲಿದೆ. ಈ ಬಾರಿ ರೋಹಿತ್ ರನ್ನು ತಮ್ಮ ತಂಡಕ್ಕೆ ಖರೀದಿಸಲು ಮೂರು ಫ್ರಾಂಚೈಸಿಗಳು ಪ್ರಮುಖವಾಗಿ ಪೈಪೋಟಿ ನಡೆಸಿವೆ ಎನ್ನಲಾಗುತ್ತಿದೆ.
ಕಳೆದ ಐಪಿಎಲ್ ಮುಗಿದ ಮೇಲೆ ರೋಹಿತ್ ಶರ್ಮಾರನ್ನು ಮುಂಬೈ ಮುಂದಿನ ಆವೃತ್ತಿಯಿಂದ ಕೈಬಿಡಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ತಕ್ಕಂತೆ ಅವರಿಂದ ಕಳೆದ ಸೀಸನ್ ನಲ್ಲಿ ನಾಯಕತ್ವ ಕಿತ್ತುಕೊಳ್ಳಲಾಗಿತ್ತು. ಆದರೆ ರೋಹಿತ್ ಇತ್ತೀಚೆಗೆ ಭಾರತ ತಂಡದ ನಾಯಕರಾಗಿ ಟಿ20 ವಿಶ್ವಕಪ್ ಗೆದ್ದ ಮೇಲೆ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಹಿಟ್ ಮ್ಯಾನ್ ನನ್ನು ಕೊಳ್ಳಲು ಮೂರು ತಂಡಗಳು ಆಸಕ್ತಿ ವಹಿಸಿದೆ. ಈ ನಡುವೆ ಸ್ವತಃ ಮುಂಬೈ ಇಂಡಿಯನ್ಸ್ ರೋಹಿತ್ ರನ್ನು ರಿಲೀಸ್ ಮಾಡುವ ಮನಸ್ಸು ಹೊಂದಿಲ್ಲ ಎನ್ನಲಾಗುತ್ತಿದೆ. ಆದರೆ ರೋಹಿತ್ ರನ್ನು ಕೊಳ್ಳಲು ಇದೀಗ ಮೂರು ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ.
ಆ ಪೈಕಿ ಮೊದಲನೆಯದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ. ಈ ತಂಡದ ನಾಯಕ ಕೆಎಲ್ ರಾಹುಲ್ ರನ್ನು ಈ ಬಾರಿ ರಿಲೀಸ್ ಮಾಡಲು ಫ್ರಾಂಚೈಸಿ ಯೋಜನೆ ರೂಪಿಸಿದೆ. ಹಾಗಿದ್ದಲ್ಲಿ ನಾಯಕನ ಸ್ಲಾಟ್ ಖಾಲಿಯಾಗಲಿದ್ದು ಆ ಸ್ಥಾನಕ್ಕೆ ರೋಹಿತ್ ರನ್ನು ಕರೆತರಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ರೋಹಿತ್ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ರೋಹಿತ್ ಹರಾಜಿಗೆ ಬಿದ್ದರೆ ಅವರನ್ನು ತಮ್ಮ ತೆಕ್ಕೆಗೆ ಹಾಕಲು ಡೆಲ್ಲಿ ಹೊಂಚು ಹಾಕಿ ಕಾಯುತ್ತಿದೆ. ಇನ್ನೊಂದೆಡೆ ಇದುವರೆಗೆ ಟೂರ್ನಿಯಲ್ಲಿ ಆರಕ್ಕೇರದೇ ಮೂರಕ್ಕಿಳಿಯ ಪರ್ಫಾರ್ಮೆನ್ಸ್ ನೀಡುತ್ತಿರುವ ಪಂಜಾಬ್ ಕಿಂಗ್ಸ್ ಕೂಡಾ ಪ್ರಬಲ ನಾಯಕನ ಹುಡುಕಾಟದಲ್ಲಿದೆ. ಮುಂದಿನ ಆವೃತ್ತಿಗೆ ರೋಹಿತ್ ರನ್ನು ಖರೀದಿ ಮಾಡಲು ಅವಕಾಶವಿದೆಯೇ ಎಂದು ಕಾಯುತ್ತಿದೆ. ಆದರೆ ಇದಕ್ಕಿಂತ ಮೊದಲು ಮುಂಬೈ ರೋಹಿತ್ ರನ್ನು ರಿಲೀಸ್ ಮಾಡಲಿದೆಯೇ ಎಂದು ಕಾದುನೋಡಬೇಕಿದೆ.