ಬೆಂಗಳೂರು: ಐಪಿಎಲ್ 2025 ರಲ್ಲಿ ಇಂದು ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮೊದಲು ಚಿನ್ನಸ್ವಾಮಿ ಮೈದಾನದ ಹೊರಗೆ ಸಿಎಸ್ ಕೆ ಜೆರ್ಸಿ ಎಂದು ಬ್ಲ್ಯಾಕ್ ಆಂಡ್ ವೈಟ್ ಜೆರ್ಸಿಯನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೂ ಕಾರಣವಿದೆ.
ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ಕ್ರೀಡಾ ವೈಷಮ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ಮೈದಾನದಲ್ಲಿ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಾಲೆಳೆಯುವುದು, ಟೀಕಿಸುವುದು ಇದ್ದಿದ್ದೇ. ಇದೀಗ ಆರ್ ಸಿಬಿ ಅಭಿಮಾನಿಗಳು ಸಿಎಸ್ ಕೆಯ ವಿಚಿತ್ರ ಟಿಶರ್ಟ್ ಮಾರಾಟ ಮಾಡುತ್ತಿದ್ದಾರೆ.
ಬಿಳಿ ಟಿ ಶರ್ಟ್ ಗೆ ಕಪ್ಪು ಶೇಡ್ ಇರುವ ಟಿ ಶರ್ಟ್ ಮೇಲೆ 2016 ಮತ್ತು 2017 ನೇ ವರ್ಷವನ್ನು ನಮೂದಿಸಲಾಗಿದೆ. ಇದೆರಡು ವರ್ಷ ಸಿಎಸ್ ಕೆ ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಬ್ಯಾನ್ ಆಗಿತ್ತು. ಹೀಗಾಗಿಯೇ ಆರ್ ಸಿಬಿ ಅಭಿಮಾನಿಗಳು ಸಿಎಸ್ ಕೆ ಅಭಿಮಾನಿಗಳನ್ನು ಅಣಕಿಸಲು ಈ ಟಿ ಶರ್ಟ್ ತೊಟ್ಟು ಮೈದಾನಕ್ಕೆ ಬರಲು ನಿರ್ಧರಿಸಿದ್ದಾರೆ.