ಶಿವಮೊಗ್ಗ: ರಣಜಿ ಕ್ರಿಕೆಟ್ ಟ್ರೋಫಿ ಪಂದ್ಯದಲ್ಲಿ ಮಧ‍್ಯಪ್ರದೇಶ ಮತ್ತು ಕರ್ನಾಟಕ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಹಾಗಿದ್ದರೂ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದ ಮಧ್ಯಪ್ರದೇಶ ಮೂರು ಅಂಕಗಳನ್ನು ಪಡೆದರೆ ಕರ್ನಾಟಕ ಒಂದೇ ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 426 ರನ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಮಧ್ಯಪ್ರದೇಶ ಆರಂಭದಲ್ಲಿ ಎಡವಿದರೂ ಬಳಿಕ ಆದಿತ್ಯ ಶ್ರೀವಾತ್ಸವ ಭರ್ಜರಿ ಶತಕದ ನೆರವಿನಿಂದ 431 ರನ್ ಗಳಿಸಿ ಕೇವಲ ಐದು ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಆದಿತ್ಯ 192 ರನ್ ಗಳಿಸಿ ಔಟಾದರು.
ದ್ವಿತೀಯ ಇನಿಂಗ್ಸ್ ನಲ್ಲಿ ಅಂತಿಮ ದಿನದಂತ್ಯಕ್ಕೆ ಕರ್ನಾಟಕ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಕ್ವಾರ್ಟರ್ ಫೈನಲ್ ಹಂತಕ್ಕೇರುವ ಕರ್ನಾಟಕದ ಕನಸು ಸದ್ಯಕ್ಕೆ ಕನಸಾಗಿಯೇ ಉಳಿದಿದೆ.