ಮುಂಬೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ರವಿಶಾಸ್ತ್ರಿ ಕೋಚ್ ಆಗಿದ್ದಾಗ ಮೂಲೆಗುಂಪು ಮಾಡಲಾಗಿತ್ತು ಎಂಬ ಆರೋಪಗಳಿತ್ತು. ಅದೀಗ ನಿಜವೆನಿಸುತ್ತಿದೆ.
ಇತ್ತೀಚೆಗೆ ಅಶ್ವಿನ್ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವಿನ ವೇಳೆ ರವಿಶಾಸ್ತ್ರಿಯಿಂದ ತನಗಾದ ಅವಮಾನವನ್ನು ಹಂಚಿಕೊಂಡಿದ್ದಾರೆ.
ಟೆಸ್ಟ್ ಸರಣಿ ಗೆಲುವಿನ ಬಳಿಕ ರವಿಶಾಸ್ತ್ರಿ ಅಂದು ಐದು ವಿಕೆಟ್ ಕಿತ್ತ ಕುಲದೀಪ್ ಯಾದವ್ ರನ್ನು ವಿದೇಶದಲ್ಲಿ ಭಾರತದ ನಂ.1 ಸ್ಪಿನ್ನರ್ ಎಂದು ಹೊಗಳಿದ್ದರು. ನನಗೆ ಆಗ ಹೇಗನಿಸಿತ್ತು ಎಂದರೆ ಯಾರೋ ನನ್ನನ್ನು ಬಸ್ ನಿಂದ ಹೊರ ಹಾಕಿದಂತೆ. ನಾನೂ ಚೆನ್ನಾಗಿ ಆಡಿದ್ದೆ. ಆದರೆ ಐದು ವಿಕೆಟ್ ಕೀಳಲು ಸಾಧ‍್ಯವಾಗಿರಲಿಲ್ಲ. ಹಾಗಂತ ನಾವು ಪ್ರಯೋಜನಕ್ಕಿಲ್ಲ ಎಂದು ಅರ್ಥವೇ?
ಕುಲದೀಪ್ ಯಾದವ್ ಬಗ್ಗೆ ನನಗೆ ಹೆಮ್ಮೆಯಿತ್ತು. ಆದರೆ ಆಗ ನನ್ನನ್ನು ನಡೆಸಿಕೊಂಡ ರೀತಿ ತುಂಬಾ ಬೇಸರವುಂಟು ಮಾಡಿತ್ತು. ತಂಡದ ಸೆಲೆಬ್ರೇಷನ್ ಸಂದರ್ಭದಲ್ಲೂ ಬರಬೇಕೆನಿಸಲಿಲ್ಲ. ಆದರೆ ಕೊನೆಗೆ ಇದು ನಾವೆಲ್ಲಾ ಸೇರಿ ಪಡೆದುಕೊಂಡ ಗೆಲುವು ಎಂಬ ಕಾರಣಕ್ಕೆ ಸೇರಿಕೊಂಡೆ ಎಂದು ಅಶ್ವಿನ್ ಬಹಿರಂಗಪಡಿಸಿದ್ದಾರೆ.