ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಈಗ ತನ್ನ ಪರಿಸ್ಥಿತಿ ಬಗ್ಗೆ ರಿಷಬ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ದೆಹಲಿ-ಡೆಹ್ರಾಡೂನ್ ರಸ್ತೆಯಲ್ಲಿ ತಡ ರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ರಿಷಬ್ ಗಂಭೀರ ಗಾಯಗೊಂಡಿದ್ದರು. ಆಗ ಅವರ ಜೊತೆ ಬೇರೆ ಯಾರೂ ಇರಲಿಲ್ಲ. ಕೊನೆಗೆ ರಸ್ತೆಯಲ್ಲೇ ಸಾಗುತ್ತಿದ್ದ ಬಸ್ ಚಾಲಕ ಮತ್ತು ನಿರ್ವಾಹಕ ರಿಷಬ್ ಪಂತ್ ರನ್ನು ಗುರುತಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಅದೃಷ್ಟವಶಾತ್ ಅವರ ಪ್ರಾಣ ಉಳಿದಿತ್ತು. ಆದರೆ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ಈ ಘಟನೆ ಕ್ರಿಕೆಟ್ ಲೋಕವನ್ನೇ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ ರಿಷಬ್ ಕಾಲು ಮುರಿತಕ್ಕೊಳಗಾಗಿದ್ದರು. ಅಲ್ಲದೆ, ಕೈ, ಬೆನ್ನಿಗೂ ಏಟಾಗಿತ್ತು. ಬಳಿಕ ಮುಂಬೈನಲ್ಲಿ ತಜ್ಞ ವೈದ್ಯರು ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.
ಶಸ್ತ್ರಚಿಕಿತ್ಸೆಗೊಳಗಾದ ಆರೇ ತಿಂಗಳಲ್ಲಿ ಮತ್ತೆ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿಕೊಳ್ಳುವಷ್ಟು ಸುಧಾರಿಸಿದ್ದರು. ಇದೀಗ ಅವರು ಗುಣಮುಖರಾಗಿದ್ದು, ಇನ್ನೂ 100% ಫಿಟ್ ಆಗಿಲ್ಲ. ಹೀಗಾಗಿ ಈ ಬಾರಿ ಐಪಿಎಲ್ ನಲ್ಲಿ ಅವರು ಭಾಗಿಯಾಗುವುದು ಇನ್ನೂ ಅನುಮಾನವಾಗಿದೆ.
ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ತಾವು ಇನ್ನೂ 100% ಫಿಟ್ ಆಗಿಲ್ಲ. ಚೇತರಿಕೆಯ ಹಂತದಲ್ಲಿದ್ದೇನಷ್ಟೇ ಎಂದು ಮೊಣಕಾಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.