ಬೆಂಗಳೂರು: ಭಾರೀ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಮೊದಲ ದಿನದ ಆಟ ರದ್ದಾಗಿದೆ. ಇದರ ನಡುವೆ ನೆಟ್ಟಿಗರು ವಿನೂತನ ಐಡಿಯಾವೊಂದನ್ನು ನೀಡಿ ಅಣಕ ಮಾಡಿದ್ದಾರೆ.
ಒಂದೆಡೆ ಪಂದ್ಯ ರದ್ದಾಗಿದ್ದರೆ ಇನ್ನೊಂದೆಡೆ ಬೆಂಗಳೂರಿನ ರಸ್ತೆಗಳಲ್ಲಿ ನೀರು ತುಂಬಿ ಸ್ವಿಮ್ಮಿಂಗ್ ಪೂಲ್ ಗಳಂತಾಗಿವೆ. ಅದರಲ್ಲೂ ವಿಶೇಷವಾಗಿ ಐಟಿ ಹಬ್ ಎನಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನೀರು ತುಂಬಿ ಅಕ್ಷರಶಃ ಕೆರೆಯಂತಾಗಿದೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ನೆಟ್ಟಿಗರೊಬ್ಬರು ಚಿನ್ನಸ್ವಾಮಿಯಲ್ಲಿ ಹೇಗಿದ್ದರೂ ಭಾರತ, ನ್ಯೂಜಿಲೆಂಡ್ ಟೆಸ್ಟ್ ಪಂದ್ಯವಾಡಲು ಸಾಧ್ಯವಾಗುತ್ತಿಲ್ಲ. ಅದರ ಬದಲು ಎರಡೂ ತಂಡಗಳ ನಡುವೆ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ದೋಣಿಯಾಟ ಏರ್ಪಡಿಸಿ. ಟೆಸ್ಟ್ ಪಂದ್ಯಕ್ಕೆ ನೀಡಲಾಗಿರುವ ಟಿಕೆಟ್ ನಲ್ಲೇ ಪ್ರೇಕ್ಷಕರಿಗೆ ಈ ದೋಣಿಯಾಟ ನೀಡಲು ಅವಕಾಶ ಕೊಡಿ ಎಂದು ಅಣಕ ಮಾಡಿದ್ದಾರೆ.
ಮಳೆ ಮತ್ತು ಒದ್ದೆ ಮೈದಾನದಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ದಿನದಾಟ ರದ್ದಾಗಿದೆ. ಎರಡನೇ ದಿನವಾದ ನಾಳೆಯೂ ಮಳೆ ಭೀತಿಯಿದ್ದು ದಿನದಾಟ ನಡೆಯುವುದು ಅನುಮಾನವಾಗಿದೆ. ಇದುವರೆಗೆ ಟಾಸ್ ಕೂಡಾ ನಡೆದಿಲ್ಲ. ಹವಾಮಾನ ವರದಿ ನೋಡಿದರೆ ಈ ಪಂದ್ಯ ನಡೆಯುವುದೇ ಅನುಮಾನವಾಗಿದೆ.