ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರರ ವಿರುದ್ಧ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ಬೆಂಬಲಿಗರ ಕೆಲವು ಗುಂಪು ಜನಾಂಗೀಯವಾಗಿ ನಿಂದಿಸಿದ ಘಟನೆ ಈಗ ಭಾರೀ ವಿವಾದ ಸೃಷ್ಟಿಸಿದೆ.
ಈ ಕಿಡಿಗೇಡಿಗಳ ಗುಂಪು ಮೊಹಮ್ಮದ್ ಸಿರಾಜ್ ರನ್ನು ಕುರಿತು ಬ್ರೌನ್ ನಾಯಿ ಎಂದು ಮೂದಲಿಸಿದೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಭಾರತೀಯ ನಾಯಕ ಅಜಿಂಕ್ಯಾ ರೆಹಾನೆ ಮತ್ತು ಸಿರಾಜ್ ಸ್ಥಳದಲ್ಲಿದ್ದ ಅಂಪಾಯರ್, ಮ್ಯಾಚ್ ರೆಫರಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆಯಂತೂ ಪಂದ್ಯದ ನಡುವೆ ಪೊಲೀಸರು ಬಂದು ಕುಹುಕವಾಡುತ್ತಿದ್ದ ಗುಂಪನ್ನು ಮೈದಾನದಿಂದಲೇ ಹೊರಗಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡಾ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ದುರದೃಷ್ಟಕರ ಘಟನೆ. ಜನಾಂಗೀಯವಾಗಿ ದೂಷಿಸುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದಿದೆ.
ಇನ್ನು, ಸ್ಪಿನ್ನರ್ ಆರ್ ಅಶ್ವಿನ್ ಕೂಡಾ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ನನ್ನ ನಾಲ್ಕನೇ ಆಸ್ಟ್ರೇಲಿಯಾ ಟೂರ್. ಇದುವರೆಗೆ ಹಲವು ಬಾರಿ ಇಂತಹ ಮೂದಲಿಕೆಗಳನ್ನು ಇಲ್ಲಿನ ಪ್ರೇಕ್ಷಕರಿಂದ ಕೇಳಿದ್ದೇವೆ. ಆದರೆ ಈ ಬಾರಿ ಅವರು ಎಲ್ಲೆ ಮೀರಿದ್ದಾರೆ. ಈ ಬಗ್ಗೆ ನಾವು ಅಧಿಕೃತವಾಗಿ ದೂರು ನೀಡಿದ್ದೇವೆ ಎಂದಿದ್ದಾರೆ.