ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸಚಿನ್ ತೆಂಡುಲ್ಕರ್ ಎಂದೇ ಜನಜನಿತರಾಗಿದ್ದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
39 ವರ್ಷದ ಮಿಥಾಲಿ ರಾಜ್ ತಮ್ಮ 23 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಏಕದಿನ ಮಾದರಿಯಲ್ಲಿ 7805 ರನ್, ಟೆಸ್ಟ್ ನಲ್ಲಿ 699 ರನ್ ಮತ್ತು ಟಿ20 ಕ್ರಿಕೆಟ್ ನಲ್ಲಿ 2364 ರನ್ ಗಳಿಸಿದ್ದ ಮಿಥಾಲಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಅವರ ನಾಯಕತ್ವದಲ್ಲಿ 2017 ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಫೈನಲ್ ಗೇರಿದ ಸಾಧನೆ ಮಾಡಿತ್ತು. 1999 ರಲ್ಲಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ ಇತ್ತೀಚೆಗೆ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಪಂದ್ಯವಾಡಿದ್ದರು. ಅವರ 23 ವರ್ಷಗಳ ಸುದೀರ್ಘ ಕ್ರಿಕೆಟ್ ಗೆ ಕ್ರಿಕೆಟ್ ಜಗತ್ತು ಸಲಾಂ ಮಾಡಿದ್ದು, ಮುಂದಿನ ಬದುಕಿಗೆ ಶುಭ ಹಾರೈಸುತ್ತಿದ್ದಾರೆ.