ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.
ವಿಂಡೀಸ್ ತಂಡದ ವಿರುದ್ಧ 12 ವರ್ಷಗಳ ಹಿಂದೆ ಕೊಹ್ಲಿ ಟೆಸ್ಟ್ ಪಂದ್ಯವಾಡಿದಾಗ ಆ ತಂಡದಲ್ಲಿ ಶಿವನಾರಾಯಣ್ ಚಂದ್ರಪಾಲ್ ಆಡಿದ್ದರು. ಇದೀಗ ವಿಂಡೀಸ್ ತಂಡದಲ್ಲಿ ಅವರ ಮಗ ತೇಜ್ ನರೈನ್ ಚಂದ್ರಪಾಲ್ ಆಡುತ್ತಿದ್ದಾರೆ. ಈಗಲೂ ಕೊಹ್ಲಿ ಟೀಂ ಇಂಡಿಯಾ ಭಾಗವಾಗಿದ್ದಾರೆ. ಆ ಮೂಲಕ ಎದುರಾಳಿ ತಂಡದಲ್ಲಿ ತಂದೆ ಮತ್ತು ಮಗನ ವಿರುದ್ಧ ಆಡಿದ ಅಪರೂಪದ ದಾಖಲೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೆ ಮೊದಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಈ ದಾಖಲೆ ಮಾಡಿದ್ದರು. ಅವರು 1992 ರಲ್ಲಿ ದ.ಆಫ್ರಿಕಾ ದಜಿಯೋಫ್ ಮಾರ್ಷ್ ವಿರುದ್ಧ ಆಡಿದ್ದರು. ಅದಾದ ಬಳಿಕ 2011-12 ರಲ್ಲಿ ಪುತ್ರ ಶಾನ್ ಮಾರ್ಷ್ ವಿರುದ್ಧವೂ ಆಡಿದ್ದರು. ಇದೀಗ ಕೊಹ್ಲಿ ಸಚಿನ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಇದೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಕೂಡಾ ತಂದೆ-ಮಗನಿಗೆ ಸಂಬಂಧಿಸಿದ ದಾಖಲೆ ಮಾಡಿದ್ದಾರೆ. ರವಿಚಂದ್ರನ್ ಅಶ್ವಿನ್ ವಿಂಡೀಸ್ ನ ತೇಜ್ ನರೈನ್ ವಿಕೆಟ್ ಪಡೆದರು. ವಿಶೇಷವೆಂದರೆ 10 ವರ್ಷಗಳ ಮೊದಲು ಅಶ್ವಿನ್ ತೇಜ್ ತಂದೆ ಶಿವನಾರಾಯಣ್ ಚಂದ್ರಪಾಲ್ ವಿಕೆಟ್ ಕಬಳಿಸಿದ್ದರು. ಇದೀಗ ಮಗನ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಂದೆ ಮತ್ತು ಮಗ ಇಬ್ಬರ ವಿಕೆಟ್ ಪಡೆದ ಐದನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.