ಅಹಮ್ಮದಾಬಾದ್: ಬರೋಬ್ಬರಿ ಒಂದು ದಿನ ಬ್ಯಾಟ್ ಮಾಡಿದ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಇಂದು ದ್ವಿಶತಕ ಸಿಡಿಸುತ್ತಾರೆ ಎಂಬುದೇ ಎಲ್ಲರ ಕನಸಾಗಿತ್ತು. ಆದರೆ ಅದು ಕೊನೆಗೂ ನೆರವೇರಲೇ ಇಲ್ಲ.
186 ರನ್ ಗಳಿಸಿದ್ದ ಕೊಹ್ಲಿ ಕೊನೆಯವರಾಗಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. 40 ಟೆಸ್ಟ್ ಇನಿಂಗ್ಸ್ ಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ ಇಂದಿಡೀ ಟೀಂ ಇಂಡಿಯಾ ಇನಿಂಗ್ಸ್ ನ ಆಧಾರವಾದರು. ಕೊಹ್ಲಿ ಔಟಾಗುವುದರೊಂದಿಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 571 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ 91 ರನ್ ಗಳ ಮುನ್ನಡೆ ಪಡೆಯಿತು. ಬೆನ್ನು ನೋವಿನ ಕಾರಣದಿಂದ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡಲಿಲ್ಲ.
ನಾಲ್ಕನೆಯ ದಿನವಾದ ಇಂದು ಕೊಹ್ಲಿಗೆ ಸಾಥ್ ನೀಡಿದ ಅಕ್ಸರ್ ಪಟೇಲ್ 79 ರನ್ ಗಳಿಸಿ ಔಟಾದರು. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸೀಸ್ ವಿಕೆಟ್ ನಷ್ಟವಿಲ್ಲದೇ 3 ರನ್ ಗಳಿಸಿದೆ. ನಾಳೆ ಒಂದೇ ದಿನ ಪಂದ್ಯ ಬಾಕಿಯಿದ್ದು ಈ ಪಂದ್ಯದಲ್ಲಿ ಫಲಿತಾಂಶ ನಿರೀಕ್ಷಿಸುವುದು ಕಷ್ಟವಾಗಿದೆ.