ಕ್ರೈಸ್ಟ್ ಚರ್ಚ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಈಗ ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಫಲಿತಾಂಶದ ಮೇಲೆ ದೃಷ್ಟಿ ನೆಟ್ಟಿದೆ.
ಇದಕ್ಕೆ ಕಾರಣ ಒಂದು ವೇಳೆ ಶ್ರೀಲಂಕಾ ಈ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತರೆ ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಸುಗಮವಾಗಲಿದೆ. ಲಂಕಾ ಸೋತರೆ ಟೀಂ ಇಂಡಿಯಾಗೆ ಈ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು. ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಪಂದ್ಯ ಡ್ರಾದತ್ತ ಸಾಗುವ ಎಲ್ಲಾ ಲಕ್ಷಣಗಳಿವೆ. ಹೀಗಾಗಿ ಟೀಂ ಇಂಡಿಯಾ ಈಗ ಲಂಕಾ ಪಂದ್ಯದ ಫಲಿತಾಂಶಕ್ಕಾಗಿ ಕಾಯುತ್ತಿದೆ.
ನಾಲ್ಕನೇ ದಿನದಾಟದಲ್ಲಿ ಇಂದು ಶ್ರೀಲಂಕಾ ದ್ವಿತೀಯ ಇನಿಂಗ್ಸ್ ನಲ್ಲಿ 302 ರನ್ ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ನ್ಯೂಜಿಲೆಂಡ್ ಈಗ ಗೆಲುವಿಗೆ 285 ರನ್ ಗಳಿಸಿದರೆ ಸಾಕು. ಹೀಗಾಗಿ ಈ ಟೆಸ್ಟ್ ಪಂದ್ಯದ ಫಲಿತಾಂಶ ನಾಳೆ ವೇಳೆಗೆ ತಿಳಿದುಬರಲಿದೆ.