Publish Date: Monday, 03 January 2022 (16:22 IST)
Updated Date: Monday, 03 January 2022 (16:23 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಮೂಲದ ಕೆಎಲ್ ರಾಹುಲ್ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಮೂಲಕ ರಾಹುಲ್ ದಾಖಲೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ-ದ. ಆಫ್ರಿಕಾ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಗೆ ಇದೀಗ ಅನಿರೀಕ್ಷಿತವಾಗಿ ಟೆಸ್ಟ್ ತಂಡದ ನಾಯಕತ್ವ ವಹಿಸುವ ಅವಕಾಶ ಬಂದಿದೆ. ಈ ಮೂಲಕ ಸೀಮಿತ ಓವರ್ ಗಳಲ್ಲಿ ತಂಡದ ನಾಯಕರಾಗುವ ಮೊದಲೇ ಟೆಸ್ಟ್ ತಂಡಕ್ಕೆ ನಾಯಕರಾದ ಎರಡನೇ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು.
ಅಲ್ಲದೆ, ಕರ್ನಾಟಕ ಮೂಲದವರು ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದೇ ಮೊದಲಲ್ಲ. ಆದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾದ ನಾಯಕರಾದ ಹೆಮ್ಮೆ ರಾಹುಲ್ ಅವರದ್ದು. ಭಾರತೀಯ ತಂಡವನ್ನು ಮುನ್ನಡೆಸಬೇಕೆಂಬುದು ಯಾವುದೇ ಆಟಗಾರನ ಕನಸು. ಇದು ನನಗೆ ನಿಜಕ್ಕೂ ಗೌರವ ಮತ್ತು ಸವಾಲಿನ ಕೆಲಸ ಎಂದು ರಾಹುಲ್ ಹೇಳಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿರುವ ರಾಹುಲ್ ಗೆ ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.