ಇಂಧೋರ್: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 88 ರನ್ ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿಗೆ ವೇದಿಕೆ ಸಿದ್ಧಪಡಿಸಿದ್ದು ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್.
ಕೊನೆಗೆ ಕೆಲಸ ಪೂರ್ತಿ ಮಾಡಿದ್ದು ಬೌಲರ್ ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್. ಆರಂಭಿಕರಾಗಿ ಬಂದಿದ್ದ ರೋಹಿತ್ ಶರ್ಮಾ ಅಬ್ಬರಕ್ಕೆ ಕೆಎಲ್ ರಾಹುಲ್ ಆರಂಭದಲ್ಲಿ ಕೊಂಚ ತಣ್ಣಗಿದ್ದರೂ ರೋಹಿತ್ ಔಟ್ ಆದ ಬಳಿಕ ತಾವೇ ಜವಾಬ್ದಾರಿ ಹೊತ್ತುಕೊಂಡರು. ನಂತರ ಪ್ರಶಸ್ತಿ ಸಮಾರಂಭದ ವೇಳೆ ರೋಹಿತ್ ಶರ್ಮಾ ಕೆಎಲ್ ರಾಹುಲ್ ಫಾರ್ಮ್ ಮತ್ತು ಬ್ಯಾಟಿಂಗ್ ಬಗ್ಗೆ ಕೊಂಡಾಡಿದರು.
ರೋಹಿತ್ ಕ್ರೀಸ್ ನಲ್ಲಿರುವವರೆಗೆ ಸಾಥಿಯ ಪಾತ್ರ ನಿರ್ವಹಿಸುತ್ತಿದ್ದ ರಾಹುಲ್ ನಂತರ ಗೇರ್ ಬದಲಾಯಿಸಿ 8 ಸಿಕ್ಸರ್, 5 ಬೌಂಡರಿಗಳ ಸಹಾಯದೊಂದಿಗೆ 89 ರನ್ ಗಳಿಸಿದರು. ಆದರೆ ಎಂದಿನಂತೆ ಶತಕ ಗಳಿಸಲು ಎಡವಿದರು.
ಶ್ರೀಲಂಕಾ ಬ್ಯಾಟಿಂಗ್ ಆರಂಭದಲ್ಲಿ ಉತ್ತಮವಾಗಿಯೇ ಇತ್ತು. ಆದರೆ ದ್ವಿತೀಯಾರ್ಧದಲ್ಲಿ ಭಾರತೀಯ ಸ್ಪಿನ್ನರ್ ಗಳು ಕೈಚಳಕ ತೋರುತ್ತಿದ್ದಂತೆ 7 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಅಸೇಲಾ ಗುಣರತ್ನೆ, ನಾಯಕ ತಿಸೆರಾ ಪೆರೇರಾ ಶೂನ್ಯ ಸುತ್ತಿದ್ದು ತಂಡಕ್ಕೆ ದುಬಾರಿಯಾಯಿತು. ಈ ಎರಡೂ ವಿಕೆಟ್ ಕುಲದೀಪ್ ಪಾಲಾಯಿತು.
ಒಟ್ಟಾರೆಯಾಗಿ ಯಜುವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರೆ, ಕುಲದೀಪ್ 3 ವಿಕೆಟ್ ಗಳಿಸಿದರು. ಉಳಿದ ತಲಾ ಒಂದು ವಿಕೆಟ್ ಹಾರ್ದಿಕ್ ಪಾಂಡ್ಯ ಮತ್ತು ಜಯದೇವ್ ಉನಾದ್ಕಟ್ ಪಾಲಾಯಿತು. ಶ್ರೀಲಂಕಾ 17.2 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ