ಸೂರತ್: ಕೆಎಲ್ ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ಅಬ್ಬರದಿಂದಾಗಿ ಕರ್ನಾಟಕ ಕ್ರಿಕೆಟ್ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ತಲುಪಿದೆ.
ಸೆಮಿಫೈನಲ್ ನಲ್ಲಿ ಹರ್ಯಾಣ ವಿರುದ್ಧ ಕರ್ನಾಟಕ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತ್ತು. ಕರ್ನಾಟಕ ಪರ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಐದು ವಿಕೆಟ್ ಗಳ ಗೊಂಚಲು ಪಡೆದರು.
ಇದಕ್ಕೆ ಉತ್ತರವಾಗಿ ಅಬ್ಬರದ ಬ್ಯಾಟಿಂಗ್ ಮಾಡಿದ ಕರ್ನಾಟಕದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಕೇವಲ 15 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಒಟ್ಟು 31 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ ರಾಹುಲ್ 66 ರನ್ ಗಳಿಸಿದರೆ, ಪಡಿಕ್ಕಲ್ 42 ಎಸೆತಗಳಿಂದ 11 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 87 ರನ್ ಚಚ್ಚಿದರು. ಮಯಾಂಕ್ ಅಗರ್ವಾಲ್ ಅಜೇಯ 30 ರನ್ ಗಳಿಸಿದರು. ಇದರೊಂದಿಗೆ ಹಾಲಿ ಚಾಂಪಿಯನ್ ಕರ್ನಾಟಕ ಸತತ ಮತ್ತೊಂದು ಪ್ರಶಸ್ತಿ ಗೆಲ್ಲಲು ಹೊರಟಿದೆ. ಫೈನಲ್ ನಲ್ಲಿ ನಾಳೆ ತಮಿಳುನಾಡು ತಂಡವನ್ನು ಎದುರಿಸಬೇಕಾಗಿದೆ.