ಲಾರ್ಡ್ಸ್: ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಜೋ ರೂಟ್ ದಾಖಲೆಯ ಶತಕದಿಂದ ಗೆದ್ದುಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 132 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ಇಂಗ್ಲೆಂಡ್ ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ವ್ಯರ್ಥಗೊಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಆಂಗ್ಲರು 141 ರನ್ ಗಳಿಗೆ ಆಲೌಟ್ ಆದರು. ಮೊದಲ ಇನಿಂಗ್ಸ್ ನಲ್ಲೇ ಇದು ಸಂಪೂರ್ಣ ಬೌಲರ್ ಗಳ ಮೆರೆದಾಟದ ಪಂದ್ಯ ಎನ್ನುವುದು ಖಚಿತವಾಗಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 285 ರನ್ ಗಳಿಗೆ ಆಲೌಟ್ ಆಯಿತು.
ಇದರಿಂದಾಗಿ ಇಂಗ್ಲೆಂಡ್ ಗೆ 274 ರನ್ ಗಳ ಗೆಲುವಿನ ಗುರಿ ಸಿಕ್ಕಿತು. ಈ ಮೊತ್ತ ಸಾಧಾರಣವಾಗಿದ್ದರೂ ತೀವ್ರ ತಿರುವ ಪಡೆಯುತ್ತಿದ್ದ ಪಿಚ್ ನಲ್ಲಿ ಗುರಿ ಸಾಧಿಸುವುದು ಸುಲಭವಾಗಿರಲಿಲ್ಲ.ಈ ವೇಳೆ ಇಂಗ್ಲೆಂಡ್ ಗೆ ಆಸರೆಯಾಗಿದ್ದು ಅನುಭವಿ ಜೋ ರೂಟ್. ತಮ್ಮೆಲ್ಲಾ ಅನುಭವ, ತಾಂತ್ರಿಕ ನೈಪುಣ್ಯತೆ ಪ್ರದರ್ಶಿಸಿ ಬ್ಯಾಟಿಂಗ್ ಮಾಡಿದ ಜೋ ರೂಟ್ ಅಜೇಯ 115 ರನ್ ಗಳಿಸುವ ಮೂಲಕ 5 ವಿಕೆಟ್ ಗಳ ಗೆಲುವು ಕೊಡಿಸಿದರು. ಜೋ ರೂಟ್ ಬ್ಯಾಟಿಂಗ್ ತಾಂತ್ರಿಕತೆಯನ್ನು ಕೊಂಡಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ.