ಕೋಲ್ಕೊತ್ತಾ: ಐಪಿಎಲ್ 2024 ರ ನಿನ್ನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಗ ಮಯಾಂಕ್ ಅಗರ್ವಾಲ್ ವಿರುದ್ಧ ಅನುಚಿತ ವರ್ತನೆ ತೋರಿದ ಕೆಕೆಆರ್ ಬೌಲರ್ ಹರ್ಷಿತ್ ರಾಣಾಗೆ ದಂಡ ವಿಧಿಸಲಾಗಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಹೈದರಾಬಾದ್ ಗೆ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಉತ್ತಮ ಆರಂಭ ನೀಡಿದರು. ಆದರೆ ತಂಡ 60 ರನ್ ಗಳಿಸುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಔಟಾದರು.
ಅವರ ವಿಕೆಟ್ ಕಿತ್ತ ಸಂಭ್ರಮದಲ್ಲಿ ಹರ್ಷಿತ್ ರಾಣಾ ಕೊಂಚ ಅತಿರೇಕದ ವರ್ತನೆ ತೋರಿದರು. ಮಯಾಂಕ್ ಅಗರ್ವಾಲ್ ಕಡೆಗೆ ಫ್ಲೈಯಿಂಗ್ ಕಿಸ್ ಮಾಡಿ ಕ್ರೀಸ್ ನಿಂದ ತೆರಳುವಂತೆ ಸಂಜ್ಞೆ ಮಾಡಿದ್ದರು. ಯುವ ಬೌಲರ್ ನ ಈ ವರ್ತನೆ ಭಾರೀ ಟೀಕೆಗೆ ಕಾರಣವಾಗಿತ್ತು.
ಇದೀಗ ಅವರ ತಪ್ಪಿನ ವಿಚಾರಣೆ ನಡೆಸಿದ ಮ್ಯಾಚ್ ರೆಫರಿಗಳು ಹರ್ಷಿತ್ ರಾಣಾಗೆ ಪಂದ್ಯದ ಸಂಭಾವನೆಯ ಶೇ.60 ರಷ್ಟು ದಂಡ ವಿಧಿಸಿದ್ದಾರೆ. ಮಯಾಂಕ್ ತೀರಾ ಸಮೀಪಕ್ಕೆ ಬಂದು ಈ ರೀತಿ ಮುಖಕ್ಕೆ ಗಾಳಿ ಊದಿ ಫ್ಲೈಯಿಂಗ್ ಕಿಸ್ ಮಾಡುವಂತೆ ಸೆಂಡ್ ಆಫ್ ಮಾಡಿದ ಅನುಚಿತ ವರ್ತನೆಗೆ ಯುವ ಬೌಲರ್ ಗೆ ತಕ್ಕ ಶಿಕ್ಷೆ ವಿಧಿಸಲಾಗಿದೆ.