ಚಂಡೀಘಡ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ದುರಾದೃಷ್ಟ ಮುಂದುವರಿದಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಓವರ್ ನಲ್ಲಿ ಕೇವಲ 2 ರನ್ ಗಳಿಂದ ಸೋತು ಹೋಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭಿಕ ಆಘಾತ ಅನುಭವಿಸಿದರೂ ಹೈದರಾಬಾದ್ ಬೃಹತ್ ಮೊತ್ತ ಪೇರಿಸಲು ಕಾರಣವಾಗಿದ್ದು ನಿತೀಶ್ ರೆಡ್ಡಿ ಬ್ಯಾಟಿಂಗ್. ಒಟ್ಟು 37 ಎಸೆತ ಎದುರಿಸಿದ ನಿತೀಶ್ 64 ರನ್ ಗಳಿಸಿದರು. ಬಳಿಕ ಅಬ್ದುಲ್ ಸಮದ್ 25 ರನ್ ಗಳ ಕೊಡುಗೆ ನೀಡಿದರು. ಪಂಜಾಬ್ ಪರ ಅರ್ಷ್ ದೀಪ್ ಸಿಂಗ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು.
ಈ ಮೊತ್ತ ಬೆನ್ನತ್ತಿದ ಪಂಜಾಬ್ 20 ಓವರ್ ಗಳಲ್ಲಿ 180 ರನ್ ಗಳಿಸಲಷ್ಟೇ ಶಕ್ತವಾಯಿತು. 19 ನೆಯ ಓವರ್ ವರೆಗೂ ಪಂಜಾಬ್ ಗೆಲ್ಲುವುದು ಕಷ್ಟವಾಗಿತ್ತು. ಆದರೆ 19 ನೆಯ ಓವರ್ ನಲ್ಲಿ ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮ ಸತತ ಸಿಕ್ಸರ್ ಸಿಡಿಸಿ ಗೆಲುವಿನ ಕನಸು ಚಿಗುರಿಸಿದ್ದರು. ಆದರೆ ಕೊನೆಗೆ ಎರಡು ರನ್ ಗಳಿಸಲಾಗದೇ ಸೋತು ಹೋಯಿತು.
ಈ ಸೋಲು ಪಂಜಾಬ್ ಗೆ ತೀವ್ರ ನಿರಾಸೆ ತಂದಿದೆ. ಕೊನೆಯ ಓವರ್ ನಲ್ಲಿ ಎರಡೆರಡು ವೈಡ್ ಎಸೆತವಿದ್ದರೂ ಅದರ ಲಾಭ ಬಳಸಿಕೊಳ್ಳಲು ಪಂಜಾಬ್ ವಿಫಲವಾಯಿತು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 2, ಪ್ಯಾಟ್ ಕುಮಿನ್ಸ್, ನಟರಾಜನ್, ನಿತೀಶ್ ರೆಡ್ಡಿ, ಜಯದೇವ್ ಉನಾದ್ಕಟ್ ತಲಾ 1 ವಿಕೆಟ್ ಕಬಳಿಸಿದರು.