ಹೈದರಾಬಾದ್: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೀನಾಯವಾಗಿ ಸೋತ ಬಳಿಕ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಮತ್ತು ಕೆಎಲ್ ರಾಹುಲ್ ನಡುವೆ ನಡೆದ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಕ್ನೋ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಬಿರುಗಾಳಿಯ ಬ್ಯಾಟಿಂಗ್ ನಡೆಸಿ ಕೇವಲ 9.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 167 ರನ್ ಚಚ್ಚಿ ಹಾಕಿತ್ತು. ಈ ಹೀನಾಯ ಸೋಲಿನ ಬಳಿಕ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ನಾಯಕ ಕೆಎಲ್ ರಾಹುಲ್ ಜೊತೆ ವಾಗ್ವಾದ ನಡೆಸಿ ಮೈದಾನದಲ್ಲೇ ಅವಮಾನ ಮಾಡಿದ್ದಾರೆ.
ಸಂಜೀವ್ ಗೊಯೆಂಕಾ ಜೋರು ಜೋರಾಗಿ ಕೈ ಸನ್ನೆ ಮಾಡಿಕೊಂಡು ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ರಾಹುಲ್ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್ ತಂಡಕ್ಕೆ ಇದುವರೆಗೂ ಉತ್ತಮ ಕೊಡುಗೆ ನೀಡಿದ್ದಾರೆ. ಟೀಂ ಇಂಡಿಯಾದ ಹಿರಿಯ ಆಟಗಾರರಾಗಿದ್ದಾರೆ. ಅಂತಹ ಆಟಗಾರನಿಗೆ ಮೈದಾನದಲ್ಲಿ ಎಲ್ಲರೆದುರೇ ಅವಮಾನ ಮಾಡುವ ಅಗತ್ಯವೇನಿತ್ತು. ಅಸಮಾಧಾನಗಳೇನೇ ಇದ್ದರೂ ಡ್ರೆಸ್ಸಿಂಗ್ ರೂಂನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಮಾಡಬಹುದಿತ್ತು. ಈ ರೀತಿ ನೂರಾರು ಕ್ಯಾಮರಾಗಳ ಮುಂದೆ ಇಂತಹ ಆಟಗಾರನಿಗೆ ಅವಮಾನ ಮಾಡಬೇಕಿತ್ತೇ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇಷ್ಟು ಅವಮಾನ ಮಾಡಿಸಿಕೊಂಡು ಇಂತಹ ಫ್ರಾಂಚೈಸಿ ಜೊತೆ ನೀವು ಮುಂದಿನ ಬಾರಿ ಇರಬೇಡಿ ಎಂದು ರಾಹುಲ್ ಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.