ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಗೆ ಸ್ಥಾನ ಸಿಕ್ಕಿಲ್ಲ. ಈ ವಿಚಾರದ ಬಗ್ಗೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.
ಕೆಎಲ್ ರಾಹುಲ್ ಹಿರಿಯ ಆಟಗಾರನಾಗಿದ್ದರೂ ಅವರನ್ನು ಕಡೆಗಣಿಸಲಾಗಿತ್ತು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಕೆಎಲ್ ರಾಹುಲ್ ಈ ಮೊದಲು ಹಲವು ಬಾರಿ ತಂಡಕ್ಕೆ ಆಪತ್ ಬಾಂಧವನಾಗಿ ತಂಡಕ್ಕೆ ನೆರವಾಗಿದ್ದರು. ಆದರೆ ಈಗ ಟಿ20 ವಿಶ್ವಕಪ್ ಗೆ ಅವರನ್ನು ಕಡೆಗಣಿಸಿರುವುದು ಚರ್ಚೆಗೆ ಕಾರಣವಾಗಿತ್ತು.
ಇದೀಗ ಅಜಿತ್ ಅಗರ್ಕರ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಇದುವರೆಗೆ ಒಂದೆರಡು ಪಂದ್ಯಗಳಲ್ಲಿ ಬಿಟ್ಟರೆ ಅವರಿಂದ ಉತ್ತಮ ಇನಿಂಗ್ಸ್ ಬಂದಿಲ್ಲ. ಟೀಂ ಇಂಡಿಯಾಗೆ ಸದ್ಯಕ್ಕೆ ಆರಂಭಿಕರ ಅಗತ್ಯವಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಆಡಬಲ್ಲರು. ಇಬ್ಬರೂ ಈ ಐಪಿಎಲ್ ನಲ್ಲಿ ಮಧ‍್ಯಮ ಕ್ರಮಾಂಕದಲ್ಲಿ ಆಡಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ರಾಹುಲ್ ಅತ್ಯುತ್ತಮ ಆಟಗಾರ. ಆದರೆ ಅವರು ಆರಂಭಿಕರಾಗಿ ಕಣಕ್ಕಿಳಿದಿದ್ದರಿಂದ ಅವರನ್ನು ಅನಿವಾರ್ಯವಾಗಿ ಹೊರಗಿಡಬೇಕಾಯಿತು ಎಂದು ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.