ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಮಿನಿ ಹರಾಜು ಪ್ರಕ್ರಿಯೆಗೆ ಮೊದಲು ಯಾವ ಆಟಗಾರರು ಯಾವ ತಂಡಕ್ಕೆ ಬಿಕರಿಯಾಗಬಹುದು ಎಂಬ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.
ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕ್ಯುರೇನ್ ದಾಖಲೆಯ 18 ಕೋಟಿ ರೂ.ಗೆ ಬಿಕರಿಯಾಗಿದ್ದರು. ಇದು ಐಪಿಎಲ್ ಇತಿಹಾಸದಲ್ಲೇ ದುಬಾರಿ ಖರೀದಿಯಾಗಿತ್ತು.
ಆದರೆ ಈ ಬಾರಿ ಆ ದಾಖಲೆಯೂ ಮುರಿಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಆಸ್ಟ್ರೇಲಿಯಾವನ್ನು ಏಕದಿನ ವಿಶ್ವಕಪ್ ಫೈನಲ್ ಶತಕ ಸಿಡಿಸಿ ಚಾಂಪಿಯನ್ ಮಾಡಿದ್ದ ಟ್ರಾವಿಸ್ ಹೆಡ್ ಗೆ ಈಗ ಭಾರೀ ಬೇಡಿಕೆಯಿದೆ.
ಅವರಿಗೆ ಪ್ರಮುಖ ಫ್ರಾಂಚೈಸಿಗಳು ಗಾಳ ಹಾಕುತ್ತಿವೆ. ಹೀಗಾಗಿ ಅವರು ಈ ಬಾರಿ ಸುಮಾರು 20 ಕೋಟಿ ರೂ. ಪಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಅದರಲ್ಲದೆ, ನ್ಯೂಜಿಲೆಂಡ್ ನ ರಚಿನ್ ರವೀಂದ್ರಗೂ ಭಾರೀ ಬೇಡಿಕೆಯಿದೆ.