Publish Date: Tue, 04 Apr 2023 (08:30 IST)
Updated Date: Tue, 04 Apr 2023 (09:17 IST)
ಚೆನ್ನೈ: ಐಪಿಎಲ್ 2023 ರಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಗೂ ಮೊದಲ ಜಯ ಗಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಋತುರಾಜ್ ಗಾಯಕ್ ವಾಡ್ ಸತತ ಎರಡನೇ ಅರ್ಧಶತಕ (57) ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕಾನ್ವೇ 47 ರನ್ ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಬಂದ ಧೋನಿ 3 ಎಸೆತಗಳಿಂದ 2 ಸಿಕ್ಸರ್ ಸಹಿತ 12 ರನ್ ಗಳಿಸಿದ್ದು ವಿಶೇಷವಾಗಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಕ್ನೋ ದಿಟ್ಟ ಹೋರಾಟ ನೀಡಿತು. ನಾಯಕ ರಾಹುಲ್ 20 ರನ್ ಗೆ ವಿಕೆಟ್ ಒಪ್ಪಿಸಿದರೆ ಇನ್ನೊಬ್ಬರ ಆರಂಭಿಕ ಕೈಲ್ ಮೇಯರ್ಸ್ 53 ರನ್ ಗಳ ಇನಿಂಗ್ಸ್ ಆಡಿದರು. ನಿಕಲಸ್ ಪೂರನ್ 32 ರನ್ ಗಳಿಸಿದರು. ಆದರೆ ಅಂತಿಮವಾಗಿ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಮೊದಲ ಸೋಲುಂಡಿತು.