ಬ್ರಿಸ್ಟಾಲ್: ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಭಾರತೀಯ ವನಿತೆಯರು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಭಾರೀ ಹಿನ್ನಡೆಯಿಂದಾಗಿ ಫಾಲೋ ಆನ್ ಪಡೆದಿದ್ದ ಭಾರತೀಯರು ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪದಾರ್ಪಣೆಯ ಪಂದ್ಯವಾಡುತ್ತಿರುವ ಸ್ನೇಹ ರಾಣಾ ಬೌಲಿಂಗ್ ನಲ್ಲಿ 4 ವಿಕೆಟ್ ಕಿತ್ತಿದ್ದಲ್ಲದೆ, ಬ್ಯಾಟಿಂಗ್ ನಲ್ಲಿ ಅಜೇಯ 80 ರನ್ ಗಳಿಸಿ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಮತ್ತು ಅರ್ಧಶತಕ ಗಳಿಸಿದ ದಾಖಲೆ ಮಾಡಿದರು.
ದೀಪ್ತಿ ಶರ್ಮಾ 54, ಶಫಾಲಿ ವರ್ಮ 63, ಪೂನಂ ರಾವತ್ 39 ರನ್ ಸಿಡಿಸಿದರೆ ವಿಕೆಟ್ ಕೀಪರ್ ಬ್ಯಾಟ್ಸ್ ವುಮನ್ ತಾನಿಯಾ ಭಾಟಿಯಾ ಅಜೇಯ 44 ರನ್ ಗಳಿಸಿದರು. ಇದರೊಂದಿಗೆ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 396 ಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ಇದಕ್ಕೆ ಉತ್ತರವಾಗಿ 231 ರನ್ ಗಳಿಗೆ ಆಲೌಟ್ ಆಗಿತ್ತು. ಎರಡೂ ಇನಿಂಗ್ಸ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.