ಬರ್ಮಿಂಗ್ ಹ್ಯಾಮ್`ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನ 9 ವಿಕೆಟ್`ಗಳಿಂದ ಮಣಿಸಿದ ಟೀಮ್ ಇಂಡಿಯಾ ಫೈನಲ್`ಗೆ ಲಗ್ಗೆ ಇಟ್ಟಿದೆ. ಜೂನ್ 18ರಂದು ಓವಲ್`ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಎದುರಿಸಲಿದೆ.
ಬಾಂಗ್ಲಾದೇಶ ನೀಡಿದ್ದ 265 ರನ್`ಗಳ ಗುರಿ ಬೆನ್ನತ್ತಿದ ಭಾರತ ತಂಡ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಬುತ ಅವರ ಅದ್ಬುತ ಬ್ಯಾಟಿಂಗ್ ನೆರವಿನಿಂದ ಕೇವಲ 1 ವಿಕೆಟ್ ಕಳೆದುಕೊಂಡು 40.1 ಓವರ್`ಗಳಿಗೆ ಗೆಲುವಿನ ಗುರಿ ತಲುಪಿತು.
ಯಾವುದೇ ಹಂತದಲ್ಲೂ ಬಾಂಗ್ಲಾ ಬೌಲರ್`ಗಳು ಮೇಲುಗೈ ಸಾಧಿಸಲು ಅವಕಾಶ ನೀಡದ ಭಾರತ ಟಾಪ್ ಆರ್ಡರ್ ಬ್ಯಾಟ್ಸ್`ಮನ್`ಗಳು ರನ್ ಹೊಳೆ ಹರಿಸಿದರು. ಶಿಖರ್ ಧವನ್ ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 46 ರನ್ ಸಿಡಿಸಿ ಔಟಾದರೆ, ಬಳಿಕ ಒಂದಾದ ರೋಹಿತ್ ಮತ್ತು ಕೊಹ್ಲಿ ಜೋಡಿ ಗೆಲುವಿನ ದಡ ಸೇರಿಸಿದರು. ರೋಹಿತ್ ಶರ್ಮಾ 15 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 123 ರನ್ ಸಿಡಿಸಿದರು. ನಾಯಕನ ಆಟವಾಡಿದ ವಿರಾಟ್ ಕೊಹ್ಲಿ 96 ರನ್ ಸಿಡಿಸಿ ಚೇಸಿಂಗ್`ನಲ್ಲಿ ಕಿಂಗ್ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದರು. ಶತಕ ಗಳಿಸುವ ಅವಕಾಶವಿದ್ದರೂ ತಲೆಕೆಡಿಸಿಕೊಳ್ಳದ ಕೊಹ್ಲಿ ತಂಡ ಗೆಲುವಿಗೆ ಹೆಚ್ಚು ಒತ್ತು ನೀಡಿದ್ದು ನಾಯಕನ ಪ್ರಬುದ್ಧತೆಯನ್ನ ತೋರಿಸುತ್ತಿತ್ತು.