Publish Date: Sun, 19 Jun 2022 (20:35 IST)
Updated Date: Sun, 19 Jun 2022 (20:36 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಅಂತಿಮ ಟಿ20 ಪಂದ್ಯಕ್ಕೆ ಮಳೆ ಕಾಟ ಎದುರಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಪರೂಪಕ್ಕೆ ನಡೆಯುತ್ತಿರುವ ಪಂದ್ಯ ಇದಾಗಿದೆ. ಆದರೆ ವರುಣರಾಯ ಕಳೆದ ಎರಡು ದಿನಗಳಿಂದ ಇಲ್ಲಿ ಎಡೆಬಿಡದೇ ಸುರಿಯುತ್ತಿದ್ದು, ಇಂದೂ ಗುಡುಗು-ಮಿಂಚು ಸಹಿತ ಮಳೆಯಾಗುತ್ತಿದೆ.
ಇದರಿಂದಾಗಿ ತಡವಾಗಿ ಆರಂಭವಾಗಿ 19 ಓವರ್ ಗೆ ಕಡಿತಗೊಂಡಿದ್ದ ಪಂದ್ಯ ಇದೀಗ ಮತ್ತೆ ಅರ್ಧಕ್ಕೆ ನಿಂತಿದೆ. ಇಂದೂ ಕೂಡಾ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿ 3.3 ಓವರ್ ಗಳ ಆಟವಾಡಿತ್ತು. ಅಷ್ಟರಲ್ಲೇ 28 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಋತುರಾಜ್ ಗಾಯಕ್ ವಾಡ್ 10 ಮತ್ತು ಇಶಾನ್ ಕಿಶನ್ 15 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ಶ್ರೇಯಸ್ ಅಯ್ಯರ್ ಖಾತೆ ತೆರೆಯದೇ ಮತ್ತು ರಿಷಬ್ ಪಂತ್ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಇದೀಗ ಮಳೆಯಾಗುತ್ತಿದ್ದು, ಮಳೆ ನಿಲ್ಲುವವರೆಗೂ ಕಾದು ನೋಡುವುದು ಅನಿವಾರ್ಯ. ಒಂದು ವೇಳೆ ಪಂದ್ಯ ನಡೆದರೂ ಓವರ್ ಸಾಕಷ್ಟು ಕಡಿತವಾಗಲಿದೆ.