ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದೆ.
ಭಾರತದ ಆರಂಭ ಇನ್ನು ಉತ್ತಮವಾಗಿರಲಿಲ್ಲ. ಇನ್ ಫಾರ್ಮ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ 6 ರನ್ ಗಳಿಸಿ ಔಟಾದರೆ ಇಶಾನ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್-ಋತುರಾಜ್ ಗಾಯಕ್ ವಾಡ್ ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದರು. ಸೂರ್ಯ ಎಂದಿನಂತೆ ಹೊಡೆಬಡಿಯ ಆಟದ ಮೂಲಕ 29 ಎಸೆತಗಳಿಂದ 39 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ಔಟಾದರು.
ಆದರೆ ಋತುರಾಜ್ ಮಾತ್ರ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ ಅರ್ಧಶತಕ ದಾಟುತ್ತಿದ್ದಂತೇ ಬಿರುಸಿನ ಆಟಕ್ಕಿಳಿದರು. ಒಟ್ಟು 57 ಎಸೆತ ಎದುರಿಸಿದ ಋತುರಾಜ್ 123 ರನ್ ಗಳಿಸಿ ಅಜೇಯರಾಗುಳಿದರು. ಟಿ20 ಕ್ರಿಕೆಟ್ ನಲ್ಲಿ ಇದು ಅವರ ಚೊಚ್ಚಲ ಶತಕವಾಗಿತ್ತು. ಈ ಮೂಲಕ ಭಾರತ 200 ರ ಗಡಿ ದಾಟಲು ಸಾಧ‍್ಯವಾಯಿತು. ತಿಲಕ್ ವರ್ಮ ರನ್ ಗಳ ಕೊಡುಗೆ ನೀಡಿದರು.