ಬೆಂಗಳೂರು: 2008 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದ ವಿರಾಟ್ ಕೊಹ್ಲಿ ಇದುವರೆಗೆ ಅದೇ ಐಪಿಎಲ್ ಫ್ರಾಂಚೈಸಿ ಜೊತೆಗೆ ತಮ್ಮ ನಂಟು ಉಳಿಸಿಕೊಂಡಿದ್ದಾರೆ.
ಆರ್ ಸಿಬಿ ಎಂದರೆ ಕೊಹ್ಲಿಗೆ ಎರಡನೇ ತವರು ಮನೆಯಿದ್ದಂತಾಗಿದೆ. ಹಾಗಿದ್ದರೂ ಕೊಹ್ಲಿ ಒಮ್ಮೆ ಆರ್ ಸಿಬಿ ತೊರೆದು ಬೇರೆ ಫ್ರಾಂಚೈಸಿ ಜೊತೆಗೆ ಸೇರುವ ಯೋಚನೆಯನ್ನೂ ಮಾಡಿದ್ದರಂತೆ. ಕೊಹ್ಲಿಗೆ ಸಾಕಷ್ಟು ಫ್ರಾಂಚೈಸಿಗಳಿಂದ ಬೇಡಿಕೆಯಿದೆ. ಹೀಗಾಗಿ ಯಾಕೆ ತಮ್ಮನ್ನು ಹರಾಜಿಗೆ ಒಳಪಡಿಸಿಕೊಳ್ಳಬಾರದು ಎಂದು ಕೊಹ್ಲಿ ಯೋಚಿಸಿದ್ದರಂತೆ. ಆದರೆ ಅದರಿಂದ ಹಿಂದೆ ಸರಿಯಲು ಕಾರಣವೇನು ಎಂಬುದನ್ನು ಅವರೇ ಹೇಳಿದ್ದಾರೆ.
ಹಲವು ಬಾರಿ ನನ್ನನ್ನು ಹರಾಜಿಗೊಳಪಡಿಸಲು ಆಫರ್ ಬಂದಿತ್ತು. ನಾನೂ ಕೂಡಾ ಯಾಕಾಗಬಾರದು ಎಂದು ಯೋಚಿಸಿದ್ದೆ. ಇದನ್ನು ಹೇಳಲು ನನಗೆ ಸಂಕೋಚವಿಲ್ಲ. ಆದರೆ ಬಳಿಕ ಆರ್ ಸಿಬಿಗೇ ನಿಷ್ಠನಾಗಿರಲು ತೀರ್ಮಾನಿಸಿದೆ. ನೀವು ಎಷ್ಟೇ ಐಪಿಎಲ್ ಗೆದ್ದರೂ, ವಿಶ್ವಕಪ್ ಗೆದ್ದರೂ ಕೊನೆಯಲ್ಲಿ ನಿಮ್ಮನ್ನು ಯಾರೂ ಹೇ ಐಪಿಎಲ್ ಚಾಂಪಿಯನ್ ಎಂದೋ, ವಿಶ್ವಕಪ್ ಚಾಂಪಿಯನ್ ಎಂದೋ ಕರೆಯಲ್ಲ. ನೀವು ಎಷ್ಟು ಉತ್ತಮ ವ್ಯಕ್ತಿ ಎಂದು ಮಾತ್ರ ನೋಡುತ್ತಾರೆ.
ಒಂದು ಕೊಠಡಿಯಲ್ಲಿ ನಾಲ್ಕೈದು ಜನ ನನ್ನನ್ನು ನೋಡಿ ಐಪಿಎಲ್ ಚಾಂಪಿಯನ್ ಎಂದು ಕರೆಯುವುದಕ್ಕಿಂತ ಜನರ ಪ್ರೀತಿಯೇ ನನಗೆ ಹೆಚ್ಚು ಎನಿಸಿತು. ಆರ್ ಸಿಬಿ ನನ್ನ ಮೇಲೆ ವಿಶ್ವಾಸವಿಟ್ಟಿದೆ. ನಾನು ಚೆನ್ನಾಗಿ ಆಡುವಾಗಲೂ, ಆಡದೇ ಇದ್ದಾಗಲೂ ನನ್ನ ಬೆನ್ನಿಗೆ ನಿಂತಿದೆ. ಇಂತಹ ಸಂದರ್ಭಗಳಲ್ಲಿ ಪತ್ನಿ ಅನುಷ್ಕಾ ಕೊಡುವ ಸಲಹೆಯನ್ನು ಮಾತ್ರ ಪರಿಗಣಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.