ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಮಹತ್ವದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯದ ಮುಂಬೈನಲ್ಲಿ ನಡೆಯಲಿದೆ.
ಈಗಾಗಲೇ ಲಂಕಾ, ವಿಂಡೀಸ್, ದ.ಆಫ್ರಿಕಾ ವಿರುದ್ಧದ ಟಿ20 ಸರಣಿ ಗೆದ್ದಿರುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಈಗ ಆಸ್ಟ್ರೇಲಿಯಾ ಸವಾಲು ಎದುರಾಗಿದೆ. ಆದರೆ ಈ ಎದುರಾಳಿಯನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ.
ಮುಂಬೈ ಹೇಳಿ ಕೇಳಿ ರೋಹಿತ್ ತವರೂರು. ಹಿಂದಿನ ದಾಖಲೆ ಗಮನಿಸಿದರೆ ಇಲ್ಲಿ ರನ್ ಮಳೆ ಗ್ಯಾರಂಟಿ. ಹಾಗಿದ್ದರೂ ಇಬ್ಬನಿ ಕೂಡಾ ಪ್ರಮುಖವಾಗುತ್ತದೆ. ಹೀಗಾಗಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದರೆ ಉತ್ತಮ. ಕೊಹ್ಲಿಗೆ ತಂಡದ ಆಯ್ಕೆ ವಿಚಾರದಲ್ಲಿ ಅದರಲ್ಲೂ ಆರಂಭಿಕರ ಆಯ್ಕೆ ವಿಚಾರದಲ್ಲಿ ದೊಡ್ಡ ತಲೆನೋವು ಎದುರಾಗಲಿದೆ. ಅಂತಿಮವಾಗಿ ಆರಂಭಿಕ ಸ್ಥಾನಕ್ಕೆ ರೋಹಿತ್ ಜತೆಗೆ ಧವನ್ ಗೆ ಓಟು ಬೀಳುತ್ತಾ, ಕೆಎಲ್ ರಾಹುಲ್ ಗೆ ಅದೃಷ್ಟ ಖುಲಾಯಿಸುತ್ತಾ ನೋಡಬೇಕು. ಉಳಿದಂತೆ ಆರನೇ ಕ್ರಮಾಂಕಕ್ಕೆ ಮನೀಶ್ ಪಾಂಡೆ ಆಯ್ಕೆಯಾಗುವ ಸಾಧ‍್ಯತೆಯಿದೆ. ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.