ಸೈಂಟ್ ಜಾರ್ಜ್ ಪಾರ್ಕ್: ಭಾರತ ಮತ್ತು ದ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಗೆಲ್ಲಬೇಕಾಗಿದ್ದ ಪಂದ್ಯವನ್ನು ಕೈಯಾರೆ ಹಾಳು ಮಾಡಿಕೊಂಡ ಟೀಂ ಇಂಡಿಯಾ ದಾಖಲೆಯೊಂದನ್ನು ತಪ್ಪಿಸಿಕೊಂಡಿದೆ.
ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟಿಗರು ಕೈ ಕೊಟ್ಟಿದ್ದು ದುಬಾರಿಯಾಯಿತು. ಆದರೆ ಕೊನೆಯಲ್ಲಿ ಜವಾಬ್ಧಾರಿಯುತ ಆಟವಾಡಿದ ಹಾರ್ದಿಕ್ ಪಾಂಡ್ಯ 39 ಮತ್ತು ಅಕ್ಸರ್ ಪಟೇಲ್ 27, ತಿಲಕ್ ವರ್ಮ 20 ರನ್ ಗಳಿಸಿದ್ದರಿಂದ ಭಾರತ ಗೌರವಯುತ ಮೊತ್ತ ದಾಖಲಿಸಿತು.
ಈ ಸುಲಭ ಮೊತ್ತವನ್ನು ಬೆಂಬೆತ್ತುವಾಗ ಆಫ್ರಿಕಾ ಕೂಡಾ ತಡವರಿಸಿತು.ಒಂದು ಹಂತದಲ್ಲಿ 86 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಗೆರಾಲ್ಡ್ 9 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 19 ರನ್ ಸಿಡಿಸಿ ತಂಡಕ್ಕೆ ಗೆಲುವು ಕೊಡಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದಿದ್ದ ತ್ರಿಸ್ಟಾನ್ ಸ್ಟಬ್ಸ್ 47 ರನ್ ಗಳಿಸಿದರು. ಭಾರತದ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 5 ವಿಕೆಟ್ ಕಬಳಿಸಿ ಮಿಂಚಿದರು. ಅಂತಿಮವಾಗಿ ಆಫ್ರಿಕಾ 19 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು.
ಈ ಗೆಲುವಿನೊಂದಿಗೆ ದ ಆಫ್ರಿಕಾ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿತು. ಆದರೆ ಭಾರತ ದೊಡ್ಡ ದಾಖಲೆಯೊಂದನ್ನು ತಪ್ಪಿಸಿಕೊಂಡಿತು. ಇದುವರೆಗೆ ಕಳೆದ 11 ಟಿ20 ಪಂದ್ಯಗಳಿಂದ ಭಾರತ ಸೋಲೇ ಅರಿಯದೇ ಮುನ್ನುಗ್ಗುತ್ತಿತ್ತು. ಈ ಪಂದ್ಯವನ್ನೂ ಗೆದ್ದಿದ್ದರೆ ಸತತವಾಗಿ 12 ಪಂದ್ಯಗಳನ್ನು ಗೆದ್ದ ದಾಖಲೆ ಮತ್ತೊಮ್ಮೆ ಸರಿಗಟ್ಟುತ್ತಿತ್ತು. ಆದರೆ ಇದೀಗ ಗೆಲುವಿನ ಸರಪಳಿ ಮುರಿದುಬಿದ್ದಿದೆ.