Publish Date: Fri, 20 Jun 2025 (08:29 IST)
Updated Date: Fri, 20 Jun 2025 (08:35 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ರೋ-ಕೊ ಇಲ್ಲದ ಟೀಂ ಇಂಡಿಯಾಗೆ ಈಗ ರೂಟ್ ಕಿತ್ತೆಸೆಯುವುದೇ ದೊಡ್ಡ ಸವಾಲಾಗಲಿದೆ.
ಟೀಂ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ-ರೋಹಿತ್ (ರೋ-ಕೊ) ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಟೀಂ ಇಂಡಿಯಾ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಕೊಹ್ಲಿ ಇಲ್ಲದ ತಂಡವನ್ನು ಊಹಿಸಲೂ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅವರಿದ್ದರೆ ಮೈದಾನದಲ್ಲಿ ತಂಡದ ಉತ್ಸಾಹವೇ ಬೇರೆ ರೀತಿ ಇರುತ್ತಿತ್ತು.
ಈಗ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಇಂಗ್ಲೆಂಡ್ ಎದುರಿಸಲಿದೆ. ಭಾರತ ತಂಡಕ್ಕೆ ಇಂಗ್ಲೆಂಡ್ ತಂಡದಲ್ಲಿ ಹೆಚ್ಚು ಕಾಡಬಹುದಾದ ಬ್ಯಾಟಿಗನೆಂದರೆ ಅನುಭವಿ ಜೋ ರೂಟ್. ಭಾರತದ ವಿರುದ್ಧ ಪ್ರತೀ ಬಾರಿಯೂ ಜೋ ರೂಟ್ ಉತ್ತಮವಾಗಿಯೇ ಆಡಿದ್ದಾರೆ. ಜೊತೆಗೆ ಈಗ ಅವರು ಉತ್ತಮ ಫಾರ್ಮ್ ನಲ್ಲೂ ಇದ್ದಾರೆ. ಹೀಗಾಗಿ ರೂಟ್ ಕಿತ್ತೆಸೆಯದೇ ಟೀಂ ಇಂಡಿಯಾಕ್ಕೆ ಗೆಲ್ಲಲು ಕಷ್ಟ.
ಇಂಗ್ಲೆಂಡ್ ನ ಬಲಿಷ್ಠ ಬ್ಯಾಟಿಂಗ್ ನ ಹಳಿ ತಪ್ಪಿಸಲು ಜಸ್ಪ್ರೀತ್ ಬುಮ್ರಾ ಮೇಲೆಯೇ ಹೆಚ್ಚು ಅವಲಂಬಿತರಾಗಬೇಕಾಗುತ್ತದೆ. ಭಾರತದ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಕೊಹ್ಲಿ-ರೋಹಿತ್ ಇಲ್ಲದೇ ಹೋದರೂ ತಂಡದಲ್ಲಿ ಪ್ರತಿಭಾವಂತ ಬ್ಯಾಟಿಗರಿದ್ದಾರೆ. ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಕೆಎಲ್ ರಾಹುಲ್ ಈಗ ಅನುಭವಿಗಳೇ. ಆದರೆ ಗಿಲ್ ಇದುವರೆಗೆ ವಿದೇಶೀ ನೆಲದಲ್ಲಿ ಭರ್ಜರಿ ಇನಿಂಗ್ಸ್ ಆಡಿಲ್ಲ ಎಂಬ ಅಪವಾದವಿದೆ. ಅದನ್ನು ಅವರು ಇಲ್ಲಿ ತೊಡೆದು ಹಾಕಬೇಕಿದೆ. ಉಳಿದಂತೆ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಕರುಣ್ ನಾಯರ್ ಗೂ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಐಪಿಎಲ್ ಅಲ್ಲದೆ ದೇಶೀಯ ಕ್ರಿಕೆಟ್ ನಲ್ಲೂ ಅವರು ಮಿಂಚಿದ್ದರು.
ಇನ್ನು, ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ರೆಡ್ಡಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಬಹುದು. ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಬುಮ್ರಾ ಜೊತೆಗೆ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್ ರನ್ನು ಕಣಕ್ಕಿಳಿಸಬಹುದು. ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದರೆ ರವೀಂದ್ರ ಜಡೇಜಾ ಏಕ ಮಾತ್ರ ಸ್ಪಿನ್ನರ್ ಆಗಿರಲಿದ್ದಾರೆ. ಕುಲದೀಪ್ ಯಾದವ್ ಬೆಂಚ್ ಕಾಯಿಸಬೇಕಾಗಬಹುದು.