ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 64 ರನ್ ಗಳ ಅಂತರದಿಂದ ಗೆದ್ದುಕೊಂಡ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು.
ಐದನೇ ಟೆಸ್ಟ್ ಪಂದ್ಯದಲ್ಲಿ 259 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 195 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಭರ್ಜರಿ ಅಂತರದ ಗೆಲುವು ಸಾಧಿಸಿತು. ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಏಕಾಂಗಿ ಹೋರಾಟ ನಡೆಸಿದರು. ಒಟ್ಟು 128 ಎಸೆತ ಎದುರಿಸಿದ ಅವರು 84 ರನ್ ಗಳಿಸಿ ಕೊನೆಯವರಾಗಿ ಔಟಾದರು.
ಇದರೊಂದಿಗೆ ಮೂರನೇ ದಿನಕ್ಕೆ ಮತ್ತೊಮ್ಮೆ ಟೆಸ್ಟ್ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಬಹುತೇಕ ಭಾರತೀಯ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸಿದ್ದರು. ಆದರೆ ಇಂದು ಭೋಜನ ವಿರಾಮದ ಬಳಿಕ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆಯುವಲ್ಲಿ ಸಫಲರಾದರು. ಅದರ ಹೊರತಾಗಿ ಇಂಗ್ಲೆಂಡ್ ನ ಟಾಪ್ ಆರ್ಡರ್ ಹಳಿ ತಪ್ಪಿಸಿದ್ದು ರವಿಚಂದ್ರನ್ ಅಶ್ವಿನ್. ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಬಳಿಸಿದ್ದ ಅವರು ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೂಲಕ ನೂರನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ನಡೆಸಿದ ದಾಖಲೆ ಮಾಡಿದರು.
ಇನ್ನೊಂದೆಡೆ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದಿದ್ದ ಕುಲದೀಪ್ ಯಾದವ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ತಮ್ಮದಾಗಿಸಿಕೊಂಡರು. ಇನ್ನೊಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.